ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅಧಿಕಾರಕ್ಕೆರೀದ್ದು, ಇದಾದ ಬಳಿಕ ಮಹಾ ರಾಷ್ಟ್ರದ ರಾಜಕೀಯ ಹೊಸ ಮಗ್ಗಲಿಗೆ ಹೊರಳಿದಂತೆ ಕಾಣುತ್ತಿದೆ.
ವಿಪಕ್ಷ ನಾಯಕರು ಅಧಿಕಾರದಲ್ಲಿರುವವರ ಬಗ್ಗೆ ಮೃದು ಧೋರಣೆ ತಳೆದಂತೆ ಕಾಣುತ್ತಿದೆ. ಮಂಗಳವಾರ ಸಿಎಂ ದೇವೆಂದ್ರ ಫಡ್ನವೀಸ್ ಅವರನ್ನು ಉದ್ಧವ್ ಠಾಕ್ರೆ ಭೇಟಿಯಾದರೆ, ಇಂದು ಎನ್‌ಸಿಪಿ ನಾಯಕ ಶರಾದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ತಿನ ನಂತರ ಕಚೇರಿಯಲ್ಲಿ ಭೇಟಿಯಾದರು. ಪಶ್ಚಿಮ ಮಹಾರಾಷ್ಟ್ರದ ಫಾಲ್ತಾನ್‌ನ ರೈತರೊಂದಿಗೆ ಭೇಟಿಯಾದ ಪವಾರ್ ಪ್ರಧಾನಿ ಮೋದಿಗೆ ದಾಳಿಂಬೆ ಹಣ್ಣುಗಳನ್ನು ನೀಡಿದರು.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿ ಮಾಡಿದ ಮರುದಿನವೇ ಪ್ರಧಾನಿ ಮೋದಿ ಅವರನ್ನು ಪವಾರ್ ಭೇಟಿ ಮಾಡಿರುವುದು ಚರ್ಚೆಗೆ ಆಸ್ಪದ ನೀಡಿದೆ.
ಭೇಟಿ ಹಿಂದಿನ ಉದ್ದೇಶವೇನು?
ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಪಡೆಯುವ ಸಲುವಾಗಿ ಉದ್ಧವ್ ಠಾಕ್ರೆ ಹಾಗೂ ಶರಾದ್ ಪವಾರ್ ಬಿಜೆಪಿ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಇನ್ನು ಚಳಿಗಾಲದಲ್ಲಿ ಅನೇಕ ಮಹತ್ವದ ಮಸೂದೆಗಳು ಮಂಡನೆಯಾಗುತ್ತಿದ್ದು, ಶರಾದ್ ಪವಾರ್ ಪಕ್ಷ ಹಾಗೂ ಉದ್ಧವ್ ಠಾಕ್ರೆ ಪಕ್ಷ ಎನ್ಡಿಎ ಅನ್ನು ಬೆಂಬಲಿಸುವ ಬಗ್ಗೆಯೂ ಚರ್ಚೆ ನಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಎರಡೂ ಪಕ್ಷಗಳು ಕೇಂದ್ರ ಸರ್ಕಾರ ಮಸೂದೆಗಳಿಗೆ ಬೆಂಬಲ ನೀಡಿದರೆ ಲೆಕ್ಕಾಚಾರ ಸಂಪೂರ್ಣ ಬದಲಾಗಲಿದೆ.