ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಸ್ಟರ್ ಪ್ಲಾನ್ ಪ್ರಕಾರ, ಮುಂದಿನ ದಿನಗಳಲ್ಲಿ ವರ್ಷಕ್ಕೆ ಅಂದಾಜು 10 ಕೋಟಿ ಪ್ರಯಾಣಿಕರನ್ನು ನಿರ್ವಹಿಸಲು ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಮಂಡಳಿ ಇತ್ತೀಚೆಗೆ ಇದಕ್ಕೆ ಅನುಮೋದನೆ ನೀಡಿದೆ.
ಮೂಲಭೂತ ಸೌಕರ್ಯಗಳಲ್ಲಿ, ಟರ್ಮಿನಲ್‌ಗಳ ನಡುವೆ ಪ್ರಯಾಣಿಕರನ್ನು ಸಾಗಿಸಲು ಸ್ವಯಂಚಾಲಿತ ಪೀಪಲ್ ಮೂವರ್ ಒಂದು ಹೊಸ ವೈಶಿಷ್ಟ್ಯವಾಗಿರುತ್ತದೆ. ಮುಂದಿನ ಐದು ವರ್ಷಗಳಲ್ಲಿ 2 ಬಿಲಿಯನ್ ಡಾಲರ್ ಅಂದಾಜು ವೆಚ್ಚದೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸಬಹುದು ಎಂದು ವಿಮಾನ ನಿಲ್ದಾಣ ನಿರ್ವಾಹಕರು ತಿಳಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮೂರನೇ ಟರ್ಮಿನಲ್ ನ್ನು ರಚಿಸಲು ಸ್ಥಳಾವಕಾಶವನ್ನು ನಿಗದಿಪಡಿಸುವುದರ ಜೊತೆಗೆ, ಈಗಿರುವ ಎರಡು ಟರ್ಮಿನಲ್‌ಗಳ ವಿಸ್ತರಣೆ ಮಾಡಲಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸತ್ಯಕಿ ರಘುನಾಥ್ ಹೇಳುವಂತೆ, ಮಾಸ್ಟರ್ ಪ್ಲಾನ್ ನವೀಕರಣದ ಮೂಲಕ ನಮ್ಮ ಗುರಿ 10 ಕೋಟಿಗಿಂತಲೂ ಹೆಚ್ಚು ವಾರ್ಷಿಕ ಪ್ರಯಾಣಿಕರು ಮತ್ತು 1.5 ಮಿಲಿಯನ್ ಟನ್ ಸರಕುಗಳನ್ನು ನಿಭಾಯಿಸಲು ಸಾಕಷ್ಟು ಮೂಲಸೌಕರ್ಯ ಹೆಚ್ಚಿಸುವುದು ಮತ್ತು ಅದಕ್ಕಾಗಿ ಸ್ಥಳ ನಿಗದಿಪಡಿಸುವುದಾಗಿರುತ್ತದೆ ಎನ್ನುತ್ತಾರೆ.