ರೇಣುಕಾ ಕೆ. ತಳವಾರ
ಹುಬ್ಬಳ್ಳಿ: ಗ್ರಾಮೀಣ ಭಾಗದಲ್ಲಿ ಹೊಲ ಗದ್ದೆಗಳಲ್ಲಿ ನಿತ್ಯ ಕೆಲಸ ಮಾಡುವ ರೈತ ಮಹಿಳಾ ಕೂಲಿ ಕಾರ್ಮಿಕರಿಗೆ ಶಿಶು ಪಾಲನಾ ಕೇಂದ್ರಗಳು ಅನುಕೂಲವಾಗಲಿವೆ. ಗ್ರಾಮೀಣ ಮಹಿಳೆಯರ ಮಕ್ಕಳ ಶೈಕ್ಷಣಿಕೆ ಹಾಗೂ ಬೌದ್ಧಿಕ ಬೆಳವಣಿಗೆಗೆ “ಕೂಸಿನ ಮನೆ” ಮುನ್ನುಡಿ ಬರೆಯಲಿದೆ.
6 ತಿಂಗಳ ಮಗುವಿನಿಂದ 6 ವರ್ಷವರೆಗಿನ 30 ಮಕ್ಕಳು ಶಿಶು ಪಾಲನಾ ಕೇಂದ್ರಗಳಲ್ಲಿ ಪ್ರವೇಶ ಪಡೆಯಬಹುದು. ಶಿಶು ಪಾಲನಾ ಕೇಂದ್ರಗಳು ತಿಂಗಳಲ್ಲಿ 26 ದಿನ 6 ರಿಂದ 8 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ಮಕ್ಕಳ ಪಾಲನೆ, ಆರೈಕೆಗೆ ವಿಶೇಷವಾಗಿ ಹತ್ತನೇ ತರಗತಿ ಪಾಸಾದ ನರೇಗಾ ಮಹಿಳಾ ಕೂಲಿ ಕಾರ್ಮಿಕರನ್ನೇ (ಜಾಬ್ ಕಾರ್ಡ್ ಹೊಂದಿರುವವರು) 100 ದಿನ ಅವಧಿಗೆ ತಲಾ ಒಂದು ಕೇಂದ್ರಕ್ಕೆ 8 ಕಾರ್ಮಿಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಮಹತ್ವಾಕಾಂಕ್ಷಿ ಯೋಜನೆ:
ಶಿಶುಪಾಲನಾ ಕೇಂದ್ರ (ಕೂಸಿನ ಮನೆ) ಸ್ಥಾಪನೆಗೂ ಮೊದಲ ಹಂತವಾಗಿ ಬೆಳಗಾವಿ ಹಾಗೂ ಕಲಬುರಗಿ ವಿಭಾಗದ 13 ಜಿಲ್ಲೆಗಳ ಗ್ರಾಮ ಪಂಚಾಯತಿಗಳಲ್ಲಿ ಶಿಶು ಪಾಲನಾ ಕೇಂದ್ರ ಆರಂಭಿಸಿ ಅದರ ಯಶಸ್ಸಿನ ಬೆನ್ನಲ್ಲೇ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಜ್ಯದ 40,000 ಗ್ರಾಮ ಪಂಚಾಯಿತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆಗೊಳಿಸಿದೆ.
ಮಕ್ಕಳ ಆರೋಗ್ಯ ತಪಾಸಣೆ:
ಸ್ಥಳೀಯ ಮಟ್ಟದ ಆರೋಗ್ಯ ಇಲಾಖೆ ಸಿಬ್ಬಂದಿ ಶಿಶು ಪಾಲನಾ ಕೇಂದ್ರಕ್ಕೆ ಪ್ರತಿದಿನ ಭೇಟಿ ನೀಡಿ ಮಕ್ಕಳ ತಪಾಸಣೆ ನಡೆಸಿ ಅವರ ವಯಸ್ಸು ತೂಕ ಆಧರಿಸಿ ಸಮತೋಲನ ಆಹಾರ ನೀಡಲು ಸಲಹೆ ನೀಡಲಾಗುತ್ತದೆ. ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಕಿಚಡಿ ನೀಡಲಾಗುತ್ತದೆ. ಅಲ್ಲದೆ ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತು ಮಕ್ಕಳಿಗೆ ತಿಂಡಿ, ತಿನಿಸು ವಿತರಣೆಗೆ ವ್ಯವಸ್ಥೆ ಕೈಗೊಳ್ಳಲಾಗುತ್ತದೆ.
ಸಮಿತಿ ರಚನೆ:
ಶಿಶು ಪಾಲನಾ ಕೇಂದ್ರಗಳ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ. ಮೂಲ ಸೌಲಭ್ಯ ಹೊಂದಿರುವ ಗ್ರಾಮ ಪಂಚಾಯತಿಗಳನ್ನು ಗುರುತಿಸಲು ತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರಚಿಸಲಾಗಿದೆ.
ಕೊಪ್ಪಳದಲ್ಲಿವೆ 133 ಕೇಂದ್ರ:
ಕೊಪ್ಪಳ ಜಿಪಂ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ಕೊಪ್ಪಳ 37, ಯಲಬುರ್ಗಾ 22, ಕುಷ್ಟಗಿ 33, ಗಂಗಾವತಿ 16, ಕನಕಗಿರಿ 8, ಕಾರಟಗಿ 3 ಹಾಗೂ ಕುಕನೂರು 14 ಸೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯ ಹೊಂದಿರುವ ಒಟ್ಟು 133 ಗ್ರಾಪಂ ಕಟ್ಟಡ ಹಾಗೂ ಶಾಲಾ ಕಟ್ಟಡ ಸಮುದಾಯ ಭವನಗಳನ್ನು ಗುರುತಿಸಿದೆ. ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 5 ದಿನ ತರಬೇತಿ ಹಮ್ಮಿಕೊಳ್ಳಲಾಗಿದೆ.
ಆ. 15ರಂದು ಈ ಶಿಶು ಪಾಲನಾ ಕೇಂದ್ರಗಳಿಗೆ ಸರ್ಕಾರದಿಂದ ಅಧಿಕೃತ ಚಾಲನೆ ಸಿಗಲಿದೆ.