Saturday, December 20, 2025

ಸರ್ಕಾರಿ ನೌಕರರಿಗೆ ಹೊಸ ರೂಲ್ಸ್: ಇನ್ಮುಂದೆ ಸ್ಲೀವ್​ಲೆಸ್ ಡ್ರೆಸ್, ಹರಿದ ಜೀನ್ಸ್ ಹಾಕೋ ಹಾಗಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕಚೇರಿಗೆ ಬರುವಾಗ ಸರಿಯಾದ, ಸಭ್ಯ ಉಡುಗೆ ತೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಳೆದ ಸಮಯದಲ್ಲಿ ಕೆಲ ನೌಕರರು ಅಸಭ್ಯ ಉಡುಗೆ ಧರಿಸಿ ಕಚೇರಿಗೆ ಬರುವ ಪ್ರಕರಣಗಳು ಬಹಳಷ್ಟು ವರದಿಯಾಗಿದ್ದು, ಸಾರ್ವಜನಿಕ ಮತ್ತು ಕೆಲವು ಸಂಸ್ಥೆಗಳಿಂದ ದೂರುಗಳು ಬಂದಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ತಿಳಿಸಿದೆ. ಈ ಕ್ರಮದ ಹಿಂದೆ ಸರಕಾರಿ ಅಧಿಕಾರಿಗಳ ಪ್ರತಿಷ್ಠೆ, ಕಚೇರಿ ಪ್ರಾತಿನಿಧ್ಯ ಮತ್ತು ಸಾರ್ವಜನಿಕರ ಮೇಲೆ ಆಗುವ ಪರಿಣಾಮವನ್ನು ಗಮನಿಸಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇದೀಗ ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾ ಅಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿಗಳಿಗೆ ಈ ಸೂಚನೆ ಕಳುಹಿಸಲಾಗಿದೆ. ಹರಿದ ಜೀನ್ಸ್, ಸ್ಲೀವ್‌ಲೆಸ್ ಉಡುಗೆ, ತುಂಬಾ ಬಿಗಿಯಾದ ಬಟ್ಟೆ ಇತ್ಯಾದಿ ಧರಿಸುವುದು ಅನ್ಯರಿಗೆ ಅಸಮಾಧಾನ ಉಂಟುಮಾಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ನೌಕರರು ತಮ್ಮ ಉಡುಗೆಯನ್ನು ಸಭ್ಯವಾಗಿ ಇಟ್ಟುಕೊಂಡು, ಕಚೇರಿ ಪರಿಸರಕ್ಕೆ ಅನುಗುಣವಾಗಿ ಇರಬೇಕು ಎಂದು ಇಲಾಖೆ ಹೇಳಿದೆ.

ಜೊತೆಗೆ ನೌಕರರು ಕಚೇರಿಗೆ ಪ್ರವೇಶಿಸುವಾಗ ಮತ್ತು ಹೊರಹೋಗುವಾಗ ಲೆಡ್ಜರ್‌ನಲ್ಲಿ ದಾಖಲೆ ಮಾಡಲು, ಬೆಳಿಗ್ಗೆ 10:10ಕ್ಕೆ ಕಚೇರಿಯಲ್ಲಿರಲು ಮತ್ತು ಕೆಲಸದ ವೇಳೆ ತಮ್ಮ ಸ್ಥಾನದಲ್ಲಿ ಹಾಜರಾಗಲು ಸೂಚಿಸಲಾಗಿದೆ. ಈ ನಿಯಮ ಪಾಲನೆ ಮೂಲಕ ಕಚೇರಿ ಶಿಸ್ತನ್ನು ಹೆಚ್ಚಿಸುವ ಮತ್ತು ಸರ್ಕಾರಿ ಕಾರ್ಯಕ್ಷಮತೆಯನ್ನು ಉತ್ತೇಜಿಸುವುದು ಸರ್ಕಾರದ ಉದ್ದೇಶವಾಗಿದೆ.

error: Content is protected !!