ಹೊಸದಿಗಂತ ಡಿಜಿಟಲ್ ಡೆಸ್ಕ್:
ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ. ಇದೇ ತಿಂಗಳಿನಿಂದ ತತ್ಕಾಲ್ ಟಿಕೆಟ್ ಖಚಿತಪಡಿಸಲು ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸುವುದು ಕಡ್ಡಾಯವಾಗಿದೆ. ಇನ್ನು ಸಕ್ರಿಯ ಮೊಬೈಲ್ ಸಂಖ್ಯೆ ಇಲ್ಲದೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ.
ಈ ವ್ಯವಸ್ಥೆಯ ಮೂಲಕ ಏಜೆಂಟ್‌ಗಳ ಮೂಲಕ ನಡೆಯುತ್ತಿದ್ದ ನಕಲಿ ಬುಕಿಂಗ್ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ರೈಲ್ವೆಯ ಮುಖ್ಯ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಮಾಹಿತಿ ಪ್ರಕಾರ, OTP ಆಧಾರಿತ ತತ್ಕಾಲ್ ವ್ಯವಸ್ಥೆಯನ್ನು ಪ್ರಾರಂಭಿಕ ಹಂತದಲ್ಲಿ ಮುಂಬೈ–ಅಹಮದಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ದೇಶದಾದ್ಯಂತ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಟಿಕೆಟ್ ಬುಕ್ಕಿಂಗ್ ಸಂದರ್ಭದಲ್ಲಿ ಪ್ರಯಾಣಿಕರು ನೀಡಿದ ಮೊಬೈಲ್ ಸಂಖ್ಯೆಗೆ ತಕ್ಷಣವೇ OTP ಬರುತ್ತದೆ. ಆ OTPನ್ನು ಸರಿಯಾಗಿ ನಮೂದಿಸಿದ ನಂತರವೇ ಟಿಕೆಟ್ ಖಚಿತವಾಗುತ್ತದೆ.
ಇದರ ಜೊತೆಗೆ, ಐಆರ್‌ಸಿಟಿಸಿ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಸಹ ತತ್ಕಾಲ್ ಬುಕಿಂಗ್‌ಗೆ ಕಡ್ಡಾಯವಾಗಿದೆ. ಆಧಾರ್ ಲಿಂಕ್ ಆಗದ ಖಾತೆಗಳಿಂದ ಇನ್ನು ಮುಂದೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ಅವಕಾಶವಿಲ್ಲ.

