September 3, 2026
Thursday, September 3, 2026
spot_img

ಸ್ಪೀಡ್ ಪೋಸ್ಟ್ ಹೊಸ ದರ ಪ್ರಕಟ: ಯಾವ ಸೇವೆಗೆ ಎಷ್ಟು ಶುಲ್ಕ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಅಂಚೆ ಇಲಾಖೆಯು ಇತಿಹಾಸದಲ್ಲೇ ಮೊದಲ ಬಾರಿಗೆ ‘ದಾಖಲೆ’ ಎಂದರೆ ಏನು ಎಂಬುದಕ್ಕೆ ಅಧಿಕೃತ ವಿವರಣೆ ನೀಡಿದೆ. ಪತ್ರಗಳು, ಪ್ರಿಂಟೆಡ್ ಸಾಮಗ್ರಿಗಳು ಹಾಗೂ ಮರುಮಾರಾಟ ಮೌಲ್ಯವಿಲ್ಲದ ಸೌಜನ್ಯದ ವಸ್ತುಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಇವುಗಳಿಗೆ ನಿಗದಿತ ರಿಯಾಯಿತಿ ಶುಲ್ಕ ಅನ್ವಯವಾಗಲಿದ್ದು, ಉಳಿದೆಲ್ಲಾ ಸಾಮಗ್ರಿಗಳನ್ನು ಪಾರ್ಸೆಲ್ ವಿಭಾಗದ ಅಡಿಯಲ್ಲೇ ಸಾಗಿಸಲಾಗುತ್ತದೆ. ಇದರೊಂದಿಗೆ 24 ಹಾಗೂ 48 ಗಂಟೆಗಳ ಸ್ಪೀಡ್ ಪೋಸ್ಟ್ ಸೌಲಭ್ಯಕ್ಕೆ ಪರಿಷ್ಕೃತ ದರಗಳನ್ನು ಪರಿಚಯಿಸಲಾಗಿದೆ.

ಯಾವೆಲ್ಲಾ ವಸ್ತುಗಳು ದಾಖಲೆಗಳ ಪಟ್ಟಿಗೆ ಸೇರುತ್ತವೆ?

ಬ್ಯಾಂಕಿಂಗ್, ವಿಮೆ ಹಾಗೂ ಹಣಕಾಸು ವಲಯದ ವೆಲ್ಕಮ್ ಕಿಟ್‌ಗಳು, ಪಾಸ್‌ಬುಕ್, ಚೆಕ್‌ಬುಕ್, ಪ್ಲಾಸ್ಟಿಕ್ ಕಾರ್ಡ್‌ಗಳು (ಡೆಬಿಟ್/ಕ್ರೆಡಿಟ್ ಕಾರ್ಡ್), ಪ್ಯಾನ್, ಆಧಾರ್, ವೋಟರ್ ಐಡಿ, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ದಾಖಲೆಗಳೆಂದು ಪರಿಗಣಿಸಲಾಗುತ್ತದೆ. ಜೊತೆಗೆ 500 ಗ್ರಾಂ ಒಳಗಿನ ವಾಣಿಜ್ಯೇತರ ರಾಖಿ ಕವರ್‌ಗಳು ಮತ್ತು ಶುಭಾಶಯ ಪತ್ರಗಳಿಗೂ ಇದೇ ನಿಯಮ ಅನ್ವಯಿಸಲಿದೆ.

ಪರಿಷ್ಕೃತ ಸ್ಪೀಡ್ ಪೋಸ್ಟ್ ದರಪಟ್ಟಿ

ಆಗಸ್ಟ್ 1ರಿಂದ ಜಾರಿಗೆ ಬರುವಂತೆ 24 ಗಂಟೆಗಳ ಸೇವೆಯಲ್ಲಿ ಚಿಲ್ಲರೆ ಗ್ರಾಹಕರು ತೂಕ ಮತ್ತು ದೂರಕ್ಕೆ ಅನುಗುಣವಾಗಿ ₹38 ರಿಂದ ₹186 ರವರೆಗೆ (ಜಿಎಸ್‌ಟಿ ಪ್ರತ್ಯೇಕ) ಪಾವತಿಸಬೇಕಾಗುತ್ತದೆ:

  • 50 ಗ್ರಾಂವರೆಗೆ: ಸ್ಥಳೀಯವಾಗಿ ₹38, ದೇಶದಾದ್ಯಂತ ₹94.
  • 51 – 250 ಗ್ರಾಂ: ₹118 ರಿಂದ ₹154.
  • 251 – 500 ಗ್ರಾಂ: ₹140 ರಿಂದ ₹186.

ಸಗಟು ಗ್ರಾಹಕರಿಗೆ 24 ಗಂಟೆಗಳ ಸೇವೆಗೆ ₹38-₹100 ಹಾಗೂ 48 ಗಂಟೆಗಳ ಸೇವೆಗೆ ₹48-₹72 ದರ ನಿಗದಿಪಡಿಸಲಾಗಿದೆ. ಚಿಲ್ಲರೆ ಗ್ರಾಹಕರಿಗೆ 48 ಗಂಟೆಗಳ ಸೇವೆಗೆ ₹61 ರಿಂದ ₹121 ವೆಚ್ಚವಾಗಲಿದೆ. ಈ ವೇಗದ ಸೇವೆಗಳು ಪ್ರಸ್ತುತ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್ ನಗರಗಳಲ್ಲಿ ಲಭ್ಯವಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !