ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಬಸ್ ಸೇವೆಯಲ್ಲಿ ಉಂಟಾಗುವ ವ್ಯತ್ಯಯಗಳನ್ನು ತ್ವರಿತವಾಗಿ ನಿಭಾಯಿಸುವ ಮಹತ್ವದ ಉದ್ದೇಶದಿಂದ ‘ಕೆಎಸ್‌ಆರ್‌ಟಿಸಿ ಅಪಘಾತ ತುರ್ತು ಸ್ಪಂದನಾ ವಾಹನ’ ಎಂಬ ವಿಶೇಷ ಸೇವೆಯನ್ನು ಪ್ರಾರಂಭಿಸಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇತ್ತೀಚೆಗೆ ಶಾಂತಿನಗರದಲ್ಲಿರುವ KSRTC ಕೇಂದ್ರ ಕಚೇರಿಯಲ್ಲಿ ಈ ನೂತನ ತುರ್ತು ಸೇವೆಗೆ ಚಾಲನೆ ನೀಡಿದರು.
ಈ ತುರ್ತು ಸೇವಾ ವಾಹನಗಳ ಪ್ರಮುಖ ಉದ್ದೇಶವೆಂದರೆ ಮಾರ್ಗಮಧ್ಯದಲ್ಲಿ ಅಪಘಾತಕ್ಕೀಡಾದ ಅಥವಾ ತಾಂತ್ರಿಕ ದೋಷದಿಂದ ನಿಂತಿರುವ KSRTC ಬಸ್‌ಗಳ ದುರಸ್ತಿ ಕಾರ್ಯಕ್ಕೆ ನೆರವಾಗುವುದು. ತಾಂತ್ರಿಕ ದೋಷದಿಂದಾಗಿ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ಹೊರಡುವ ಬಸ್‌ಗಳು ರಸ್ತೆಯಲ್ಲಿ ನಿಂತು ಟ್ರಾಫಿಕ್ ಸಮಸ್ಯೆ ಉಂಟುಮಾಡುವ ಸಂದರ್ಭಗಳಲ್ಲಿ, ಅಗತ್ಯ ಬಿಡಿಭಾಗಗಳು ಮತ್ತು ಉಪಕರಣಗಳೊಂದಿಗೆ ತಾಂತ್ರಿಕ ಸಿಬ್ಬಂದಿಯನ್ನು ಈ ವಾಹನಗಳು ತಕ್ಷಣ ಸ್ಥಳಕ್ಕೆ ತಲುಪಿಸಲಿವೆ ಎಂದು ಸಚಿವರು ತಿಳಿಸಿದರು.
ಅಷ್ಟೇ ಅಲ್ಲದೆ, ಅಪಘಾತ ಸಂಭವಿಸಿದಾಗ ಚಾಲಕರು ಮತ್ತು ನಿರ್ವಾಹಕರಿಗೆ ತಕ್ಷಣದ ನೆರವು ನೀಡುವುದರ ಜೊತೆಗೆ, ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವ ಮಹತ್ವದ ಕಾರ್ಯವನ್ನೂ ಈ ವಾಹನಗಳು ನಿರ್ವಹಿಸಲಿವೆ.
ಮೊದಲ ಹಂತವಾಗಿ, ಎರಡು ತುರ್ತು ಸ್ಪಂದನ ವಾಹನಗಳನ್ನು ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ. ಬೆಂಗಳೂರು ಸುತ್ತಮುತ್ತಲಿನ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉಂಟಾಗುವ ಅವಘಡಗಳಿಗೆ ಈ ವಾಹನಗಳು ತ್ವರಿತವಾಗಿ ಸ್ಪಂದಿಸಲಿವೆ.
ಪ್ರತಿಯೊಂದು ವಾಹನದ ವೆಚ್ಚವು 7.22 ಲಕ್ಷ ರೂ. ಆಗಿದ್ದು, 2026ರ ಜನವರಿ ಅಂತ್ಯದೊಳಗೆ ಇನ್ನೂ 10 ಹೊಸ ವಾಹನಗಳು ಸೇವೆಗೆ ಸಿದ್ಧವಾಗಲಿವೆ. ಮುಂದಿನ ದಿನಗಳಲ್ಲಿ, ರಾಜ್ಯದ ಇತರ ಜಿಲ್ಲೆಗಳಿಗೂ ಹಂತ ಹಂತವಾಗಿ ಈ ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ KSRTC, BMTC, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

