ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ವಾಹನ ಮಾಲೀಕರಿಗೆ ರಿಯಾಯಿತಿ ಸಿಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಮುಂಬೈ ಬಿಕೆಸಿ) ನಡೆದ ಬಿಸಿನೆಸ್ ಟುಡೇದ ಬಿಟಿ ಮೈಂಡ್ ರಶ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ರಾಜ್ಯದ ಹೆದ್ದಾರಿಗಳಲ್ಲಿನ ಟೋಲ್ ತೆರಿಗೆ ಮತ್ತು ಟೋಲ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಳಿದರು.
ಏಪ್ರಿಲ್ ಒಂದರ ಮೊದಲು ಟೋಲ್ ಬಗ್ಗೆ ಹೊಸ ನೀತಿಯನ್ನು ನಾವು ಪ್ರಕಟಿಸುತ್ತೇವೆ. ಇದು ಪ್ರಯಾಣಿಕರಿಗೆ ಸೂಕ್ತ ರಿಯಾಯಿತಿಗಳನ್ನು ನೀಡಲಿದೆ. ಟೋಲ್ ದರಗಳ ಬಗ್ಗೆ ಇರುವ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ರಸ್ತೆ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ. ಈಗ ಸಂಸತ್ ಅಧಿವೇಶನ ನಡೆಯುತ್ತಿದೆ, ಹೀಗಾಗಿ ಇದರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ 2025 ಏಪ್ರಿಲ್ ಒಂದರಿಂದ ಇಂತಹ ನೀತಿಯನ್ನು ತರಲಾಗುತ್ತದೆ. ಇದು ಟೋಲ್ ಪಾವತಿಸುವರಿಗೆ ರಿಲೀಫ್ ನೀಡಲಿದೆ ಎಂದಿದ್ದಾರೆ.
ಇದರ ಜೊತೆಗೆ, ಪ್ರಸ್ತುತ ಎನ್‌ಎಚ್‌ಎಐ ಟೋಲ್ ಆದಾಯ 55,000 ಕೋಟಿ ರೂಪಾಯಿಗಳಷ್ಟಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದು 1.40 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಅವರು ಹೇಳಿದರು.
ಘರೌಂಡ, ಚೊರ್ಯಾಸಿ, ನೆಮ್ಲಿ, ದ್ವಾರಕಾ ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಸ್ತುತ ಮುಂಗಡ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇಲ್ಲಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ಜನರು ನಿಲ್ಲಿಸದೆ ಟೋಲ್ ದಾಟಲು ಅನುಕೂಲವಾಗುತ್ತದೆ. ಅಲ್ಲದೆ ಶುಲ್ಕವನ್ನು ಸಹ ಕಡಿಮೆ ಮಾಡಬಹುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಧಿಸುವ ಟೋಲ್ ಶುಲ್ಕದ ಬಗ್ಗೆ ಮಾಹಿತಿಯನ್ನು ಪ್ಲಾಜಾಗಳಲ್ಲಿ ವಿವರವಾಗಿ ನೀಡಲಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿಯೂ ಶುಲ್ಕದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಶುಲ್ಕ ಹೆಚ್ಚಳ ಅಥವಾ ಯಾವುದೇ ಬದಲಾವಣೆಗಳಿದ್ದರೆ, ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅದರ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು. ಟೋಲ್ ಶುಲ್ಕ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಅವರು ಹೇಳಿದರು.