ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮದ ಕೌಂಟ್‌ಡೌನ್ ಅಧಿಕೃತವಾಗಿ ಶುರುವಾಗಿದೆ. ಕ್ರಿಸ್ಮಸ್ ಹಾಗೂ ವರ್ಷದ ಕೊನೆಯ ದಿನದ ಸಂಭ್ರಮಾಚರಣೆಗೆ ಬೆಂಗಳೂರಿನ ಹೃದಯಭಾಗವಾದ ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್‌ಗಳು ಅಕ್ಷರಶಃ ಮದುವಣಗಿತ್ತಿಯಂತೆ ಶೃಂಗಾರಗೊಂಡಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ಬ್ರಿಗೇಡ್ ರೋಡ್ ಶಾಪ್ ಅಸೋಸಿಯೇಷನ್ ವತಿಯಿಂದ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಅದ್ದೂರಿ ದೀಪಾಲಂಕಾರ ಮಾಡಲಾಗಿದೆ. ಎಂ.ಜಿ. ರಸ್ತೆಯ ಪ್ರವೇಶ ದ್ವಾರದಿಂದ ಆರಂಭವಾಗಿ ಬ್ರಿಗೇಡ್ ರಸ್ತೆಯ ಕೊನೆಯವರೆಗೆ ಸುಮಾರು 400 ಮೀಟರ್‌ಗಳಷ್ಟು ಉದ್ದಕ್ಕೆ ಹೈ-ಫೈ ಮೂವಿಂಗ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ರಂಗು ರಂಗಿನ ಬೆಳಕಿನ ಚಿತ್ತಾರವನ್ನು ನೋಡಲು ಈಗಿನಿಂದಲೇ ಜನಸಾಗರ ಹರಿದು ಬರುತ್ತಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಜನತೆ ಮುಗಿಬೀಳುತ್ತಿದ್ದಾರೆ.
ಹೊಸ ವರ್ಷದ ಸ್ವಾಗತಕ್ಕಾಗಿ ನಗರದ ಬಹುತೇಕ ಪಬ್, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಈಗಾಗಲೇ ಬುಕ್ಕಿಂಗ್‌ನಿಂದ ಭರ್ತಿಯಾಗಿವೆ. ವಾರಾಂತ್ಯದ ರಜೆ ಇರುವುದರಿಂದ ಕುಟುಂಬ ಸಮೇತರಾಗಿ ಬಂದು ಈ ಸಂಭ್ರಮವನ್ನು ಸವಿಯಲು ನಗರದ ಮಂದಿ ಸಜ್ಜಾಗಿದ್ದಾರೆ.
ಸಾರ್ವಜನಿಕರ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಪಬ್ ಹಾಗೂ ಹೋಟೆಲ್ ಮಾಲೀಕರ ಜೊತೆ ಪೊಲೀಸರು ಸಭೆ ನಡೆಸಿದ್ದು, ಸಿಸಿಟಿವಿ ಹಾಗೂ ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಒಟ್ಟಾರೆಯಾಗಿ, 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸಲು ಬೆಂಗಳೂರು ಇಡೀ ದಕ್ಷಿಣ ಭಾರತದಲ್ಲೇ ಅತ್ಯಂತ ಸುಂದರವಾಗಿ ಸಜ್ಜಾಗಿದೆ.

