January16, 2026
Friday, January 16, 2026
spot_img

ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಅಬ್ಬರ: ಬೆಂಗಳೂರಿಗರ ಸುರಕ್ಷತೆಗೆ ‘ಖಾಕಿ’ ಕವಚ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಫೀಲ್ಡಿಗಿಳಿದಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಈಗಾಗಲೇ ನಗರದಾದ್ಯಂತ ಸಂಚರಿಸಿ ಭದ್ರತಾ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ.

ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ರೌಂಡ್ಸ್ ನಡೆಸಿದ ಬಳಿಕ, ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಂಭ್ರಮಾಚರಣೆಯ ಹೆಸರಿನಲ್ಲಿ ಮಿತಿಮೀರಿದ ವರ್ತನೆ, ಕಿಡಿಗೇಡಿತನ ಅಥವಾ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೊಸ ವರ್ಷಾಚರಣೆಯ ರಾತ್ರಿ ಸಾರ್ವಜನಿಕರ ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಿಶೇಷವಾಗಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರದಂತಹ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಇನ್ನು ವಾಹನ ಸವಾರರ ಕುತೂಹಲವಾಗಿದ್ದ “ಫ್ಲೈಓವರ್‌ಗಳು ಓಪನ್ ಇರುತ್ತವೆಯೇ?” ಎಂಬ ಪ್ರಶ್ನೆಗೆ ಉತ್ತರಿಸಿರುವ ಕಮಿಷನರ್, ಮುಂಜಾಗ್ರತಾ ಕ್ರಮವಾಗಿ ಮತ್ತು ಮದ್ಯಪಾನ ಮಾಡಿ ವೇಗವಾಗಿ ವಾಹನ ಚಲಾಯಿಸುವವರನ್ನು ತಡೆಯಲು ರಾತ್ರಿ ಸಮಯದಲ್ಲಿ ನಗರದ ಬಹುತೇಕ ಫ್ಲೈಓವರ್‌ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Must Read

error: Content is protected !!