ಹೊಸದಿಗಂತ ಡಿಜಿಟಲ್ ಡೆಸ್ಕ್
ಅಡಿಲೇಡ್ ಓವೆಲ್ ನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 35 ರನ್‌ಗಳ ಭರ್ಜರಿ ಜಯದೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (35 ಎಸೆತಗಳಲ್ಲಿ 61 ರನ್) ಅಬ್ಬರದ ಆಟದ ಬಲದಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 185 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಐರ್ಲೆಂಡ್ ಪರ ವೇಗಿ ಜೋಶ್ ಲಿಟಲ್ 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಗುರಿ ಬೆನ್ನತ್ತಿದ ಐರ್ಲೆಂಡ್ ನಿಗದಿತ ಓವರ್ ಗಳಲ್ಲಿ 150-9 ಗಳನ್ನಷ್ಟೇ ಗಳಿಸುವಲ್ಲಿ ಶಕ್ತವಾಯಿತು. ಕಿವೀಸ್ ಪರ ವೇಗದ ಬೌಲರ್ ಲೂಕಿ ಫರ್ಗುಸನ್ (22 ರನ್ ಗೆ 3 ವಿಕೆಟ್) ಹಾಗೂ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್ (2-26) ಮತ್ತು ಇಶ್ ಸೋಧಿ (2-31) ಮಾರಕ ದಾಳಿ ನಡೆಸಿದರು.
ಈ ಗೆಲವಿನೊಂದಿಗೆ 5 ಪಂದ್ಯಗಳನ್ನು ಆಡಿರುವ ಕಿವೀಸ್ ಏಳು ಅಂಕಗಳೊಂದಿಗೆ(3 ಗೆಲವು) ಗ್ರೂಪ್ 1ರಲ್ಲಿ ಅಗ್ರಸ್ಥಾನ ಪಡೆದು ಸೇಮೀಸ್ ಪ್ರವೇಶಿಸಿದೆ. ತಂಡದ ಭರ್ಜರಿ ರನ್ ರೇಟ್ ಸೆಮೀಸ್ ಪ್ರವೇಶಕ್ಕೆ ಅನುಕೂಲಕವಾಯಿತು.
ಮತ್ತೊಂದು ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ!
ಗ್ರೂಪ್ 1 ರಲ್ಲಿ ಈಗ ಸೆಮೀಸ್ ಪ್ರವೇಶಕ್ಕೆ ಆಸಿಸ್- ಇಂಗ್ಲೆಂಡ್ ಹಾಗೂ ಲಂಕಾ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪ್ರಸ್ತುತ ಸಾಗುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನವನ್ನು ಎದುರಿಸುತ್ತಿದೆ. ಹಾಗೂ ಸಂಜೆ ಇಂಗ್ಲೆಂಡ್ ತಂಡವು ಶ್ರೀಲಂಕಾಕ್ಕೆ ಮುಖಾಮುಖಿಯಾಗಲಿವೆ. ಆಸ್ಟೇಲಿಯಾ ಸೆಮೀಸ್ ಕನಸು ಜೀವಂತವಾಗಿರಬೇಕಾದರೆ ಈ ಪಂದ್ಯ ಗೆಲ್ಲಬೇಕು. ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೂ ಸೆಮೀಸ್ ಪ್ರವೇಶಕ್ಕೆ ಅವಕಾಶವಿದೆ. ಆದ್ದರಿಂದ ಇಂದಿನ ಪಂದ್ಯಗಳು ರೋಚಕತೆ ಮೂಡಿಸಿವೆ.