ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 22ರಂದು ಮೊರಾದಾಬಾದ್ ವ್ಯಾಪ್ತಿಯ ಪಾಟ್ನಾ-ಚಂಡೀಗಢ ವಿಶೇಷ ರೈಲಿನೊಳಗೆ ಚೀಲದಲ್ಲಿ ಪತ್ತೆಯಾಗಿದ್ದ ನವಜಾತ ಶಿಶು ವೀರ್, ಜೀವನ್ಮರಣ ಹೋರಾಟದ ನಂತರ ಚೇತರಿಸಿಕೊಳ್ಳುತ್ತಿದೆ. ಇದೀಗ ಈ ಕಂದಮ್ಮನನ್ನು ನಮಗೆ ದತ್ತು ನೀಡಿ ಎಂದು 40ಕ್ಕೂ ಹೆಚ್ಚು ಫ್ಯಾಮಿಲಿ ಕೇಳಿದ್ದಾರೆ.
ಮೊರಾದಾಬಾದ್ ಜಿಲ್ಲಾ ಪರೀಕ್ಷಾಧಿಕಾರಿ ಎಸ್‌ಪಿ ಗೌತಮ್, ಸುಮಾರು 10 ಗಂಟೆಗಳ ಕಾಲ ಚೀಲದೊಳಗೆ ಇದ್ದ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಹಿಳಾ ಆಸ್ಪತ್ರೆ ಸಿಬ್ಬಂದಿ ಈಗ ಪ್ರೀತಿಯಿಂದ ಆ ಮಗುವಿಗೆ ವೀರ್ ಎಂದು ಹೆಸರಿಟ್ಟಿದ್ದಾರೆ. ಮಗು ಇದೀಗ ಚೇತರಿಸಿಕೊಳ್ಳುತ್ತಿದೆ ಎಂದರು.
ಪಾಟ್ನಾ-ಚಂಡೀಗಢ ವಿಶೇಷ ರೈಲಿನಲ್ಲಿ ಪ್ರಯಾಣಿಕರು ಚೀಲದೊಳಗೆ ಮಗು ಇರುವುದನ್ನು ಗಮನಿಸಿದ್ದಾರೆ. ಬಳಿಕ ಮಗುವನ್ನು ಮೊರಾದಾಬಾದ್‌ನ ಮಹಿಳಾ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ ಕರೆದೊಯ್ಯಲಾಯಿತು. ಸುಮಾರು 10 ಗಂಟೆಗಳ ಕಾಲ ಚೀಲದೊಳಗೆ ಸಿಲುಕಿಕೊಂಡಿದ್ದರಿಂದ ಹೈಪೋಕ್ಸಿಯಾಕ್ಕೆ ಕಾರಣವಾಯಿತು. ಸಕಾಲಿಕವಾಗಿ ವೈದ್ಯಕೀಯ ಆರೈಕೆ ಸಿಗದಿದ್ದರೆ ಮಾರಕವಾಗಬಹುದಾದ ಸ್ಥಿತಿ ಇದಾಗಿದೆ. ಶಿಶುವಿನ ಉಸಿರಾಟದ ಪ್ರಮಾಣ ಅಸಹಜವಾಗಿ ಹೆಚ್ಚಾಗಿತ್ತು ಮತ್ತು 72 ಗಂಟೆಗಳ ಕಾಲ CPAP ಬೆಂಬಲದಲ್ಲಿ ಇರಿಸಲಾಯಿತು. ನಂತರ ಪ್ರಮಾಣಿತ ಆಮ್ಲಜನಕ ಬೆಂಬಲಕ್ಕೆ ಸ್ಥಳಾಂತರಿಸಲಾಗಿತ್ತು.
ವೀರ್ ಸಂಪೂರ್ಣವಾಗಿ ಗುಣಮುಖನಾದ ನಂತರ, ಅವನನ್ನು ಸರ್ಕಾರಿ ಬೆಂಬಲಿತ ಮಕ್ಕಳ ಕಲ್ಯಾಣ ಸಂಸ್ಥೆಯಾದ ಚೈಲ್ಡ್‌ಲೈನ್‌ಗೆ ಹಸ್ತಾಂತರಿಸಲಾಗುವುದು. ಈಮಧ್ಯೆ, ರೈಲಿನಲ್ಲಿ ಮಗುವನ್ನು ಬಿಟ್ಟುಹೋದವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.