Friday, January 9, 2026

ಮುಂದಿನ ನಿರ್ದೇಶಕರು ಈ ತಪ್ಪನ್ನು ಮಾಡಬೇಡಿ: ಯಶ್ ಬಗ್ಗೆ ‘ಟಾಕ್ಸಿಕ್’ ಡೈರೆಕ್ಟರ್ ನೀಡಿದ ಸಲಹೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಜನವರಿ 8ರಂದು ಬಿಡುಗಡೆಯಾಗಿ ಕೇವಲ 24 ಗಂಟೆಗಳಲ್ಲಿ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಟೀಸರ್‌ನ ತಾಂತ್ರಿಕ ಗುಣಮಟ್ಟ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದ್ದು, ಸ್ಯಾಂಡಲ್‌ವುಡ್‌ನ ಗರಿಮೆಯನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಭರವಸೆ ಮೂಡಿಸಿದೆ.

ಯಶ್ ಅವರ ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಯಶ್ ಅವರನ್ನು “ಪ್ರತಿಭೆ ಮತ್ತು ಸೂಪರ್‌ಸ್ಟಾರ್‌ಡಮ್‌ನ ಅಪರೂಪದ ಸಂಗಮ” ಎಂದು ಬಣ್ಣಿಸಿರುವ ಅವರು, ಯಶ್ ಚಿತ್ರಕ್ಕಾಗಿ ತೋರುವ ಶಿಸ್ತನ್ನು ಕೊಂಡಾಡಿದ್ದಾರೆ. “ಟಾಕ್ಸಿಕ್ ಸಿನಿಮಾದಲ್ಲಿನ ‘ರಾಯ’ ಎಂಬ ಪಾತ್ರವನ್ನು ಯಶ್ ಕೇವಲ ನಿರ್ವಹಿಸಿಲ್ಲ, ತಮ್ಮ ಅಭಿನಯ ಚತುರತೆಯಿಂದ ಅದನ್ನೊಂದು ಕಲಾಕೃತಿಯಂತೆ ಕೆತ್ತಿದ್ದಾರೆ” ಎಂದು ಗೀತು ಹೆಮ್ಮೆಯಿಂದ ಹೇಳಿದ್ದಾರೆ.

ಯಶ್ ಅವರ ಜನಪ್ರಿಯತೆಯ ಹಿಂದೆ ಅವರಲ್ಲಿರುವ ನಟನಾ ಕೌಶಲ ಮರೆಯಾಗಬಾರದು ಎನ್ನುವುದು ಗೀತು ಅವರ ಆಶಯ. ಈ ಕಾರಣಕ್ಕಾಗಿ ಯಶ್ ಅವರ ಮುಂದಿನ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕರಿಗೆ ಅವರು ಒಂದು ಕಿವಿಮಾತು ಹೇಳಿದ್ದಾರೆ. “ಯಶ್ ಅವರ ಖ್ಯಾತಿಯನ್ನು ಮಾತ್ರ ಬಳಸಿಕೊಳ್ಳದೆ, ಅವರಲ್ಲಿ ಅಡಗಿರುವ ಅದ್ಭುತ ನಟನಾ ಪ್ರತಿಭೆಯನ್ನು ಸಂಪೂರ್ಣವಾಗಿ ಹೊರತೆಗೆಯುವ ಕೆಲಸವನ್ನು ನಿರ್ದೇಶಕರು ಮಾಡಬೇಕು” ಎಂದು ಅವರು ಸಲಹೆ ನೀಡಿದ್ದಾರೆ.

ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡ ಗೀತು, “ಯಶ್ ಕೇವಲ ನಟನಾಗಿರದೆ, ಕಥೆಯ ಆಳವನ್ನು ಅರಿಯಲು ನನಗೆ ಸವಾಲು ಹಾಕಿದರು. ನನ್ನ ನಿರ್ಣಯಗಳನ್ನು ಪರಿಶೀಲಿಸುವಂತೆ ಪ್ರೇರೇಪಿಸಿದರು. ಅಂತಿಮವಾಗಿ ನಿರ್ದೇಶಕಿಯ ಆಲೋಚನೆಗೆ ಸಂಪೂರ್ಣವಾಗಿ ಶರಣಾಗುವ ಮೂಲಕ ಕಲೆಯ ಸೇವೆಯಲ್ಲಿ ತೊಡಗಿಸಿಕೊಂಡರು. ಅವರಲ್ಲಿ ನಾನು ಒಬ್ಬ ಉತ್ತಮ ನಟನಷ್ಟೇ ಅಲ್ಲದೆ, ಬೆನ್ನೆಲುಬಾಗಿ ನಿಲ್ಲುವ ನಿರ್ಮಾಪಕನನ್ನು ಕಂಡುಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಈ ಭಾವುಕ ಬರಹವು ಯಶ್ ಅವರ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಟೀಸರ್ ಸುತ್ತಲಿನ ಪರ-ವಿರೋಧ ಚರ್ಚೆಗಳ ನಡುವೆಯೂ, ‘ಟಾಕ್ಸಿಕ್’ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲಾಗುವುದರಲ್ಲಿ ಅನುಮಾನವಿಲ್ಲ ಎಂಬುದು ಗೀತು ಅವರ ಮಾತುಗಳಿಂದ ಸ್ಪಷ್ಟವಾಗಿದೆ.

error: Content is protected !!