ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದೊಳಗೆ ರೋಹಿಂಗ್ಯಾಗಳು ಹಾಗೂ ಬಾಂಗ್ಲಾದೇಶದ ವಲಸಿಗರನ್ನು ಅಕ್ರಮವಾಗಿ ಸಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಆರೋಪಪಟ್ಟಿ ಸಲ್ಲಿಸಿದೆ.
ಬಾಂಗ್ಲಾದೇಶೀಯರು ಮತ್ತು ರೋಹಿಂಗ್ಯಾಗಳನ್ನು ಅಕ್ರಮವಾಗಿ ದೇಶದೊಳಗೆ ರವಾನಿಸುತ್ತಿರುವ ಕುರಿತು ಎನ್ಐಎ ಕಳೆದ ವರ್ಷ ಸ್ವಯಂಪ್ರೇರಿತವಾಗಿ ತನಿಖೆ ಕೈಗೆತ್ತಿಕೊಂಡಿತ್ತು. ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಅಕ್ರಮ ಸಾಗಾಣಿಕೆಯಲ್ಲಿ ಭಾಗಿಯಾಗಿರುವ ಸಿಂಡಿಕೇಟ್ ಒಂದನ್ನು ಪತ್ತೆಹಚ್ಚಿ ಆರುಜನರನ್ನು ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಐವರು ಹಾಗೂ ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ನ ಒಬ್ಬನ ಮೇಲೆ ಗುವಾಹಟಿ ಹೈಕೋರ್ಟ್ ನಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
ಆರೋಪಿಗಳು ಅಕ್ರಮ ನುಸುಳುಕೋರರಿಗೆ ಸಾರಿಗೆ, ವಸತಿ ಮತ್ತು ನಕಲಿ ದಾಖಲೆಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಿದ್ದರು ಎಂದು ಆರೋಪಿಸಲಾಗಿದೆ.ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ