ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಇಬ್ಬರ ಸಾವಿಗೆ ನಿಫಾ ವೈರಸ್ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ಘೋಷಿಸಿದ್ದಾರೆ.
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಅಸಹಜ ಸಾವುಗಳ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿಶೇಷ ವೈದ್ಯಕೀಯ ಸಂಶೋಧನೆ ನಡೆಸಿದ ನಂತರ ಅಧಿಕೃತವಾಗಿ 2 ಸಾವು ಸಂಭವಿಸಿರುವುದು ನಿಫಾ ವೈರಸ್ ನಿಂದ ಎಂದು ಘೋಷಿಸಿದೆ.
ಇದರ ಬೆನ್ನಲ್ಲೇ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಫಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ತಜ್ಞರ ತಂಡ ಕೇರಳಕ್ಕೆ ತೆರಳಿದೆ ಎಂದು ಮಾಂಡವೀಯ ಹೇಳಿದ್ದಾರೆ.
ಇತ್ತೀಚೆಗೆ ಸಾವನ್ನಪ್ಪಿದ್ದ ಇಬ್ಬರಿಗೆ ನಿಫಾ ವೈರಸ್ನ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಹೆಚ್ಚಿನ ಕಟ್ಟೆಚ್ಚರ ವಹಿಸಿ ಮೃತರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗಿತ್ತು. ಇಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನಿಫಾ ವೈರಸ್ ಸೋಂಕು ದೃಢಪಟ್ಟಿದೆ.
ಆಗಸ್ಟ್ 30ರಂದು ಕೋಯಿಕ್ಕೋಡ್‌ನಲ್ಲಿ ಮೊದಲ ಶಂಕಿತ ವ್ಯಕ್ತಿ ಸಾವನ್ನಪ್ಪಿದ್ದರು. 49 ವರ್ಷದ ಇವರು ಮಾರುತೋಂಕರ ಮೂಲದವರಾಗಿದ್ದು, ಆ.27ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಈ ವ್ಯಕ್ತಿಯ ಮಾದರಿಯನ್ನು ಪರೀಕ್ಷೆ ನಡೆಸಿರಲಿಲ್ಲ. ಈತನ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಮತ್ತೊಂದೆಡೆ, ಆಯಂಚೇರಿ ಮೂಲದ 40 ವರ್ಷದ ವಡಕರ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ತಕ್ಷಣ ಅವರನ್ನು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಸೋಮವಾರ ಮೃತಪಟ್ಟಿದ್ದರು.