ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ರಾಜ್ಯ ಸರ್ಕಾರ, ರಾತ್ರಿ ಸಂಚಾರ ತೆರವುಗೊಳಿಸಲು ಮುಂದಾಗಿದೆ ಎಂದು ಮೈಸೂರು- ಕೊಡಗು ಸಂಸದ ಯದುವೀರ್ ಒಡೆಯರ್ ಆರೋಪಿಸಿದ್ದಾರೆ.
ಹುಲಿ ಸಂರಕ್ಷಣೆ ಮತ್ತು ರಾತ್ರಿ ವೇಳೆಯಲ್ಲಿ ಕಾನೂನು ಬಾಹಿರ ಚಟುವಟಿಕೆಯನ್ನು ತಡೆಯಲು 2009ರಲ್ಲಿ ಕರ್ನಾಟಕವು ಚಾಮರಾಜನಗರದ ಬಂಡೀಪುರ ಮೂಲಕ ಹಾದುಹೋಗುವ ವಯನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧಿಸಿತ್ತು. ಕೇರಳ ಹಲವು ಸಲ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿತ್ತು. ಹಾಲಿ ಸಿಎಂ ಸಿದ್ದರಾಮಯ್ಯ ತಮ್ಮ ಹಿಂದಿನ ಅವಧಿಯಲ್ಲೂ ಇಂಥ ಬೇಡಿಕೆ ತಿರಸ್ಕರಿಸಿದ್ದರು ಎಂದರು.
ರಾಜಕೀಯ ಕಾರಣಕ್ಕಾಗಿ ನೈಸರ್ಗಿಕ ಪಾರಂಪರಿಕತೆಯನ್ನು ಹಾಳುಗಡೆವುದು ತಪ್ಪು, ಹೀಗಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಕೂಡಲೇ ಮಧ್ಯಪ್ರವೇಶ ಮಾಡಿ ಬಂಡೀಪುರ ಜೀವವೈವಿಧ್ಯ ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.