ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಿಖಿಲ್ ಕುಮಾರಸ್ವಾಮಿ ಮತ್ತು ನನಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿ ಸಂಸತ್ ಭವನದ ಪ್ರಧಾನಿಗಳ ಕಾರ್ಯಾಲಯದಲ್ಲಿ ಗುರುವಾರ ನಡೆಯಿತು.
ಈ ಭೇಟಿಯ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನನ್ನ ಮುಂದೆ ಇಲ್ಲ. ನಾನೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ. ನಾನು ಇಲ್ಲಿಯೇ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎನ್ನುವುದು ಅನೇಕ ಜನರ ಅಭಿಪ್ರಾಯ, ನನ್ನ ಅಭಿಪ್ರಾಯವೂ ಅದೇ ಆಗಿದೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಜನರು ಚುನಾವಣೆಗೆ ನಿಲ್ಲಿ ಎಂದು ಹೇಳುತ್ತಿದ್ದಾರೆ. ನಿಖಿಲ್, ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿ ಎಂದು ಜನ ಬಯಸುತ್ತಿದ್ದಾರೆ. ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ ಜನರ ಅನುಕಂಪವೂ ಇದೆ. ಆದರೆ, ಅವರಿಗೆ ಸ್ಪರ್ಧೆ ಮಾಡುವ ಉದ್ದೇಶವಿಲ್ಲ ಎಂದು ತಿಳಿಸಿದರು.