ಲೋಕಸಭಾ ಚುನಾವಣೆಯತ್ತ ನಿಖಿಲ್‌ ಕುಮಾರಸ್ವಾಮಿ ಚಿತ್ತ: ಅಖಿಲೇಶ್‌ ಯಾದವ್‌ ಭೇಟಿ ,ರಾಜಕೀಯ ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೆಡಿಎಸ್‌ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರನ್ನು ಭೇಟಿ ಮಾಡಿ ರಾಜಕೀಯ ಕುರಿತ ಚರ್ಚೆ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದ ನಿಖಿಲ್‌ ಕುಮಾರಸ್ವಾಮಿ ಈ ಬಾರಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಚಿಸುತ್ತಿದ್ದು, ಇದರ ನಡುವೆ ಅಖಿಲೇಶ್‌ ಯಾದವ್‌ ಭೇಟಿ ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಸತತ ಸೋಲಿನ ಕಹಿಯನ್ನು ಅನುಭವಿಸಿದರೂ ರಾಜಕೀಯ ನೆಲೆ ಕಂಡುಕೊಳ್ಳಲು ಹೋರಾಟ ಮುಂದುವರೆಸಿರುವ ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಮೊದಲೇ ರಾಜಕೀಯ ಕಾರ್ಯಗಳನ್ನು ಆರಂಭಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಯಾವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಈ ಕುರಿತು ಸ್ವತಃ ಮಾಹಿತಿ ಹಂಚಿಕೊಂಡಿರುವ ನಿಖಿಲ್‌ ಕುಮಾರಸ್ವಾಮಿ ಅವರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಹಾಗೂ Samajwadi Party ವರಿಷ್ಠ ನಾಯಕರೂ ಆಗಿರುವ ಶ್ರೀ Akhilesh Yadav ಅವರನ್ನು ಲಖನೌದ ಅವರ ನಿವಾಸದಲ್ಲಿ ಇಂದು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಲಾಯಿತು. ಅತ್ಯಂತ ವಿಶ್ವಾಸಪೂರ್ವಕ ಹಾಗೂ ಸಹೋದರ ವಾತ್ಸಲ್ಯದೊಂದಿಗೆ ನಡೆದ ಈ ಭೇಟಿಯ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯೂ ಸೇರಿದಂತೆ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಹತ್ವದ ಸಮಾಲೋಚನೆ ನಡೆಸಲಾಯಿತು ಎಂದು ಹೇಳಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ಕುಟುಂಬಗಳ ನಡುವಿನ ಬಾಂಧವ್ಯದ ಬಗ್ಗೆ ವಿಶೇಷವಾಗಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದ ಅಖಿಲೇಶ್ ಯಾದವ್ ಅವರು, ಬಹುಮುಖ್ಯವಾಗಿ ಹೆಚ್.ಡಿ.ದೇವೇಗೌಡ ಸಾಹೇಬರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಕ್ಷೇಮವನ್ನು ವಿಚಾರಿಸಿದರು. ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ ರಾಷ್ಟ್ರ ಮಟ್ಟದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಅಖಿಲೇಶ್ ಯಾದವ್‌ ಚರ್ಚೆ ನಡೆಸಿದರು. ಉತ್ತರ ಪ್ರದೇಶ ರಾಜಕಾರಣದ ಹಲವಾರು ಬೆಳವಣಿಗೆಗಳನ್ನು ಹಂಚಿಕೊಂಡರು.

ಮೂಲತಃ ಮೈಸೂರು ನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅಖಿಲೇಶ್ ಅವರು ಕರ್ನಾಟಕ, ಕನ್ನಡಿಗರ ಬಗ್ಗೆ ತಮಗಿರುವ ಅಪಾರ ಗೌರವ, ಆದರಾಭಿಮಾನವನ್ನು ಹೃದಯಪೂರ್ವಕವಾಗಿ ವ್ಯಕ್ತಪಡಿಸಿದರು. ಅವರ ವಿಶ್ವಾಸ, ಪ್ರೀತಿಗೆ ನಾನು ಅಭಿನಂದನೆಗಳನ್ನು ಸಲ್ಲಿಸಿದ್ದೇನೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!