ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಲೋಕಸಭೆ ಚುನಾವಣೆ ವೇಳೆ ನಿಖಿಲ್ (Nikhil Kumaraswamy), ವಿಜಯೇಂದ್ರ (Vijayendra) ಇಬ್ಬರೂ ಸಹೋದರ ಮನೋಭಾವದಲ್ಲಿ ಒಟ್ಟಾಗಿ ಹೋಗ್ತಾರೆ. ಉತ್ತಮ ಬಾಂಧವ್ಯದೊಂದಿಗೆ ಚುನಾವಣೆಯಲ್ಲಿ ತೊಡಗಿಸಿಕೊಳ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿಳಿಸಿದರು.
ಬಿಡದಿಯಲ್ಲಿರುವ ಹೆಚ್‌ಡಿಕೆ ತೋಟದ ಮನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ ಭೇಟಿ ನೀಡಿದರು.
ವಿಜಯೇಂದ್ರ ಭೇಟಿ ಕುರಿತು ಮಾತನಾಡಿದ ಹೆಚ್‌ಡಿಕೆ, ಬಹಳ ದಿನಗಳ ಹಿಂದೆಯೇ ವಿಜಯೇಂದ್ರ ಭೇಟಿ ಮಾಡಬೇಕಿತ್ತು. ಹಲವಾರು ಕಾರ್ಯಕ್ರಮಗಳು ಇದ್ದ ಕಾರಣ ಆಗಿರಲಿಲ್ಲ. ಇವತ್ತು ನಮ್ಮ ಭೇಟಿಯ ಉದ್ದೇಶ ರಾಜ್ಯದ ಅಭಿವೃದ್ಧಿ ದೃಷ್ಟಿ. ಮೋದಿ ಮತ್ತೆ ದೇಶದ ಪ್ರಧಾನಮಂತ್ರಿ ಆಗುವ ನಿಟ್ಟಿನಲ್ಲಿ ಕೂತು ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಮಾತಾಡಿಲ್ಲ. ಆ ಬಗ್ಗೆ ಕೇಂದ್ರ ನಾಯಕರು ಕೂತು ಚರ್ಚೆ ಮಾಡ್ತಾರೆ ಎಂದು ಹೇಳಿದರು.
ಯುವ ರಾಜ್ಯಾಧ್ಯಕ್ಷರ ನೇಮಕದಿಂದ ಕಾರ್ಯಕರ್ತರ ಹುರುಪು ಹೆಚ್ಚಾಗಿದೆ. ಅದಕ್ಕಾಗಿ ವಿಜಯೇಂದ್ರ ಅವರು ಶ್ರಮ ಹಾಕುತ್ತಿರುವುದನ್ನ ನೋಡ್ತಿದ್ದೇನೆ. 2006-07 ರಲ್ಲಿ ಯಡಿಯೂರಪ್ಪ, ನಾನು ಸರ್ಕಾರ ನಡೆಸಿದ್ದೆವು. ಇವತ್ತೂ ಸಹ ಅಂತಹ ಸರ್ಕಾರ ಬರಬೇಕು ಅನ್ನೋದು ಜನರ ಅಭಿಪ್ರಾಯ ಇದೆ. ಅವತ್ತು ನಾವು ಅಭಿವೃದ್ಧಿ ಫೌಂಡೇಷನ್ ಕೊಟ್ಟಿದ್ದೆವು ಎಂದು ನೆನಪಿಸಿಕೊಂಡರು.