ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನ ಸ್ಪರ್ಧೆಯಲ್ಲಿ ನಿಕ್ಕಿ ಹ್ಯಾಲೆಗೆ ಸೋಲು ಉಂಟಾದ ಪರಿಣಾಮ ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
ಈ ಬೆಳವಣಿಗೆಯಿಂದಾಗಿ ಕಾರ್ಲಸ್ಟನ್ ಮತ್ತು ದಕ್ಷಿಣ ಕ್ಯಾರೊಲಿನಾದಲ್ಲಿ ಆಯೋಜನೆಗೊಂಡಿದ್ದ ಪ್ರಚಾರ ಕಾರ್ಯಗಳನ್ನು ಅವರು ರದ್ದುಪಡಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಸಿಎನ್ಎನ್ ವರದಿ ಮಾಡಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 15 ರಾಜ್ಯಗಳ ಪೈಕಿ 14ರಲ್ಲಿ ತಮ್ಮ ಪರ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದು ಅವರ ಪಾಲಿಗೆ ಶುಭ ಮಂಗಳವಾರವಾಗಿದೆ. ಈಶಾನ್ಯ ರಾಜ್ಯವಾದ ವರ್ಮೌಂಟ್ನಲ್ಲಿ ಮಾತ್ರ ಹ್ಯಾಲೆಗೆ ಜಯ ಸಂದಿದೆ.
ತಮ್ಮ ಜಯದ ಕುರಿತು ಫ್ಲೋರಿಡಾದಲ್ಲಿರುವ ಮಾರಾ-ಲಾಗೊ ಬೀಚ್ ಕ್ಲಬ್ನಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, ‘ಇದು ಅದ್ಭುತ ರಾತ್ರಿಯೂ ಹೌದು ಹಾಗೂ ಅದ್ಭುತ ಹಗಲು ಕೂಡಾ’ ಎಂದಿದ್ದಾರೆ.
52 ವರ್ಷದ ಹ್ಯಾಲೆ ಅವರು ದಕ್ಷಿಣ ಕ್ಯಾರೊಲಿನಾದ ಮಾಜಿ ಗವರ್ನರ್ ಆಗಿದ್ದರು ಮತ್ತು ಟ್ರಂಪ್ ಅವಧಿಯಲ್ಲಿ ವಿಶ್ವ ಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದರು. ಹ್ಯಾಲೆ ಅವರು ಟ್ರಂಪ್ ಅವರನ್ನು ಸರಿಸುವಲ್ಲಿ ವಿಫಲರಾಗಿದ್ದಾರೆ. ಜನವರೆಯಲ್ಲಿ ಅಯೋವಾದಲ್ಲಿ ನಡೆದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು.
ಎರಡು ಬಾರಿ ದೋಷಾರೋಪಣೆ ಹೊತ್ತ, 2020ರ ಚುನಾವಣೆಯಲ್ಲಿ 70 ಲಕ್ಷ ಮತಗಳಿಂದ ಪರಾಭವಗೊಂಡ ಹಾಗೂ 4 ವಿಚಾರಣೆಗಳಲ್ಲಿ 91 ಆರೋಪಗಳನ್ನು ಎದುರಿಸಿ ಟ್ರಂಪ್, ಇದೀಗ ಅಧ್ಯಕ್ಷೀಯ ಚುನಾವಣೆಯ ಹಾದಿಯಲ್ಲಿ ಮುಂದಕ್ಕೆ ಸಾಗಿದ್ದಾರೆ.