ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ನಿಫಾ ಸೋಂಕಿತ ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ 24 ವರ್ಷದ ಆರೋಗ್ಯ ಕಾರ್ಯಕರ್ತನಿಗೆ ಈ ವೈರಸ್ ಸೋಕಿರುವುದಾಗಿ ದೃಢಪಟ್ಟಿದೆ. ಇಲ್ಲಿಗೆ ನಿಫಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ವೈರಸ್ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿ 700 ಜನರಿದ್ದು, ಹೈ ರಿಸ್ಕ್ ವಿಭಾಗದಲ್ಲಿ 77 ಮಂದಿ ಇದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ನಿಫಾ ವೈರಸ್ ಸೋಂಕಿತ ರೋಗಿಗಳನ್ನು ತಮ್ಮ ಮನೆಗಳಲ್ಲಿ ಇರುವಂತೆ ವೈದ್ಯಕೀಯ ಅಧಿಕಾರಿಗಳು ಸಲಹೆ ನೀಡಿದರು.
ಕೋಝಿಕ್ಕೋಡ್‌ನಲ್ಲಿ ಹಬ್ಬಗಳು ಮತ್ತು ಕಾರ್ಯಕ್ರಮಗಳ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ನಿಷೇಧಿಸಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಕೋಝಿಕ್ಕೋಡ್ ಜಿಲ್ಲೆಯ ವಡಕರ ತಾಲೂಕಿನ ಒಂಬತ್ತು ಪಂಚಾಯತ್‌ಗಳಲ್ಲಿ 58 ವಾರ್ಡ್‌ಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಈ ವಲಯಗಳಲ್ಲಿ, ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಕಂಟೈನ್‌ಮೆಂಟ್ ವಲಯಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಬಸ್‌ಗಳು ಅಥವಾ ವಾಹನಗಳು ನಿಫಾ ಪೀಡಿತ ಪ್ರದೇಶಗಳಲ್ಲಿ ನಿಲ್ಲದಂತೆ ಸೂಚಿಸಲಾಗಿದ್ದು, ಕೋಝಿಕ್ಕೋಡ್ ನಗರದಲ್ಲಿ ವೈರಸ್ ನಿಂದ ಬಳಲುತ್ತಿರುವ 9 ವರ್ಷದ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆರಂಭವಾದ ವೈರಸ್ ಇಡೀ ಕೇರಳಕ್ಕೆ ಹರಡುವ ಸಾಧ್ಯತೆ ಇದೆ ಎಂದು WHO ಮತ್ತು ICMR ಎಚ್ಚರಿಕೆ ನೀಡಿದೆ. ಈ ಬಾರಿ ಕೇರಳದಲ್ಲಿ ಕಂಡುಬಂದ ನಿಫಾ ಪ್ರಭೇದವು ಬಾಂಗ್ಲಾದೇಶದ ರೂಪಾಂತರವಾಗಿದೆ ಈ ರೀತಿಯ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದರಿಂದ ಸಾವಿನ ಪ್ರಮಾಣ ಹೆಚ್ಚಾಗಲಿದೆ ಎಂಬುದನ್ನು ಸಚಿವರು ವಿವರಿಸಿದರು.