ಮೃತ ಗುತ್ತಿಗೆದಾರ ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಿದ ನಿರಾಣಿ, ಕಮಿಷನ್ ಆರೋಪಗಳ ನಿರಾಕರಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ, ಬುಧವಾರ ಬೆಳಗ್ಗೆ ಬೆಳಗಾವಿಯ ಹಿಂಡಲಗದಲ್ಲಿರುವ ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ತೆರಳಿ, ಮೃತರ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಅವರು ಮನವಿ ಮಾಡಿದರು.
ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಲಿದ್ದು, ಸತ್ಯಾಂಶ ಎಲ್ಲರಿಗೂ ಗೊತ್ತಾಗಲಿದೆ. ತನಿಖೆಯಲ್ಲಿ ಸರ್ಕಾರ ಎಲ್ಲಿಯೂ ಕೂಡ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವರಾದ ಅರಗ ಜ್ಞಾನೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಹಂತದಲ್ಲಿ ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅಗತ್ಯ ಉದ್ಭವಿಸುವುದಿಲ್ಲ ಎಂಬುದು ನಿರಾಣಿ ಅವರ ಮಾತು.
ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ
ಕಮೀಷನ್ ಕೊಡದೆ ಇದ್ದಕ್ಕೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಯಾವುದೇ ಒಬ್ಬ ವ್ಯಕ್ತಿಗೆ ಟೆಂಡರ್ ನೀಡಬೇಕಾದರೆ ನಿಯಮಗಳು ಇರುತ್ತವೆ. ವರ್ಕ್ ಆರ್ಡರ್ ಕೊಡದಿದ್ದಾಗ ಅವರು ಹೇಗೆ ಕಾಮಗಾರಿ ನಡೆಸಿದ್ದಾರೋ ನಮಗೂ ಗೊತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕಮೀಷನ್ ಕಾರಣಕ್ಕಾಗಿಯೇ ಈ ಘಟನೆ ನಡೆದಿದೆ ಎಂದು ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್ ಆರೋಪ ಮಾಡುವುದು ಸರಿಯಲ್ಲ. ಅಷ್ಟಕ್ಕೂ ಅವರ ಬಳಿ ಏನು ಸಾಕ್ಷ್ಯಾಧಾರಗಳಿವೆ ಎಂದು ಪ್ರಶ್ನಿಸಿದರು.
ಕುಟುಂಬಕ್ಕೆ ಎಲ್ಲ ಮಾನವೀಯ ಸಹಾಯ
ಮಾನವೀಯತೆ ದೃಷ್ಟಿಯಿಂದ ನಾವು ಕುಟುಂಬಕ್ಕೆ ಏನೆಲ್ಲ ಸಹಾಯ ಮಾಡಬೇಕೋ ಮಾಡುತ್ತೇವೆ . ನಮ್ಮ ಸರ್ಕಾರ ಅವರ ಕುಟುಂಬದ ನೆರವಿಗೆ ಧಾವಿಸಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು. ಮೃತ ಸಂತೋಷ್ ಪತ್ನಿ ಜಯಶ್ರೀಗೆ ಸರ್ಕಾರಿ ಕೆಲಸ ಕೊಡಿಸಿದರೆ ಅವರ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಕುಟುಂಬ ಸದಸ್ಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನಿರಾಣಿ, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಜೊತೆ ಚರ್ಚಿಸಿ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!