ನಿಥಾರಿ ಹತ್ಯಾಕಾಂಡ ಪ್ರಕರಣದ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಜೈಲಿನಿಂದ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ನಿಥಾರಿ ಹತ್ಯಾಕಾಂಡ ಪ್ರಕರಣದ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇರುವ ಲುಕ್ಸಾರ್ ಕಾರಾಗೃಹದಿಂದ ಪಂಧೇರ್‌ನನ್ನು ಬಿಡುಗಡೆ ಮಾಡಲಾಗಿದೆ.
ಕಳೆದ ಸೋಮವಾರ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ 65 ವರ್ಷ ವಯಸ್ಸಿನ ಉದ್ಯಮಿ ಮಣಿಂದರ್ ಸಿಂಗ್ ಪಂಧೇರ್‌ನನ್ನು ದೋಷ ಮುಕ್ತಗೊಳಿಸಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಮನೆ ಕೆಲಸದ ಆಳು ಸುರೇಂದರ್ ಕೋಲಿ ವಿರುದ್ಧದ ದಾಖಲಾಗಿದ್ದ ಹಲವು ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ದೋಷ ಮುಕ್ತಗೊಳಿಸಿತ್ತು.

2005 – 2006ರ ನಡುವೆ ನಡೆದಿದ್ದ ಸರಣಿ ಹತ್ಯಾಕಾಂಡ ಪ್ರಕರಣಗಳಲ್ಲಿ ಸರ್ಕಾರಿ ವಕೀಲರು ಆರೋಪಿಗಳ ವಿರುದ್ಧದ ದೋಷಾರೋಪವನ್ನು ಸಾಬೀತು ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆ ಮಾಡಲಾಗಿತ್ತು. ಪೊಲೀಸರ ತನಿಖಾ ಪ್ರಕ್ರಿಯೆ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ. ಕೇವಲ ಅನುಮಾನದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪಪಟ್ಟಿ ದಾಖಲು ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಆರೋಪಿಸಲಾಗಿದ್ದ ಅನುಮಾನಾಸ್ಪದ ಕೃತ್ಯವನ್ನು ಸಾಬೀತು ಮಾಡಲು ಸರ್ಕಾರಿ ವಕೀಲರು ವಿಫಲರಾಗಿದ್ದರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ನಿಥಾರಿ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ಸುರೇಂದರ್ ಕೋಲಿ ಇನ್ನೂ ಕೂಡಾ ಜೈಲಿನಲ್ಲೇ ಇದ್ದಾನೆ. ಈತನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಸ್ನಾ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿಗಳಿಗೆ ಈ ಹಿಂದೆ ಕೆಳ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ರದ್ದು ಮಾಡಲಾಗಿದೆ. ಒಟ್ಟು 18 ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ಸುರೇಂದರ್ ಕೋಲಿ ಖುಲಾಸೆ ಆಗಿದ್ದಾನೆ. ಇನ್ನೂ 4 ಪ್ರಕರಣಗಳು ಆತನ ಮೇಲಿವೆ. ಈ ಪ್ರಕರಣಗಳ ಅಡಿ ಆರೋಪಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ನೋಯ್ಡಾದ ನಿಥಾರಿಯಲ್ಲಿ ನಡೆದ ಮಕ್ಕಳ ಹಾಗೂ ಯುವತಿಯೊಬ್ಬಳ ಸರಣಿ ಹತ್ಯಾಕಾಂಡ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಮಣಿಂದರ್ ಸಿಂಗ್ ಪಂಧೇರ್ ಹಾಗೂ ಸುರೇಂದರ್ ಕೋಲಿಯನ್ನು ಪ್ರಮುಖ ಆರೋಪಿಗಳು ಎಂದು ಪರಿಗಣಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!