ಹೊಸದಿಗಂತ ವರದಿ, ಚಿತ್ರದುರ್ಗ:
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ನಿತಿನ್ ನಬಿನ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ, ಸತತವಾಗಿ ಜನಮನ್ನಣೆ ಪಡೆದು ಸಚಿವರಾಗಿ ಕರ್ತವ್ಯ ನಿರ್ವಹಿಸಿ, ಅನೇಕ ರಾಜ್ಯಗಳಲ್ಲಿ ಪಕ್ಷ ಸಂಘಟನೆ ನಡೆಸಿ ಇದೀಗ ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರು ಎಂಬ ಖ್ಯಾತಿಗೆ ನಿತಿನ್ ನಬಿನ್ ಅವರು ಪಾತ್ರರಾಗಿದ್ದಾರೆ.ಅವರ ಕಾರ್ಯಾವಧಿಯಲ್ಲಿ ಬಿಜೆಪಿ ಪಕ್ಷವು ಸಂಘಟನಾತ್ಮಕವಾಗಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ನಿತಿನ್ ನಬಿನ್ ಅವರು ಬಿಹಾರ ಬಿಜೆಪಿಯ ಹಿರಿಯ ನಾಯಕ ಹಾಗೂ ಪಾಟ್ನಾದಿಂದ ನಾಲ್ಕು ಬಾರಿ ಶಾಸಕರಾಗಿದ್ದ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿಂಹ ಅವರ ಪುತ್ರ. ತಂದೆಯ ನಿಧನದ ಬಳಿಕ ಬಿಹಾರ ಬಿಜೆಪಿಯಲ್ಲಿ ಅವರು ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕರಾಗಿ ಬೆಳದಿದ್ದಾರೆ.ಆರೆಸ್‌ಎಸ್ ಜೊತೆ ನಿಕಟ ಸಂಬಂಧ ಹೊಂದಿರುವ ನಬಿನ್, ಸಂಘಟನಾ ಚತುರ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಪಕ್ಷದ ನೂತನ ಹುದ್ದೆಗೆ ಸ್ಪರ್ಧಿಸುವ ಮೊದಲು ನಿತಿನ್ ನಬಿನ್ ಅವರು ಬಿಹಾರ ಸರ್ಕಾರದ ಕಾನೂನು ಮತ್ತು ನ್ಯಾಯ ಹಾಗೂ ವಸತಿ ಖಾತೆ ಸಚಿವ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಉನ್ನತ ನಾಯಕತ್ವದವರೆಗೆ ಸಂಪರ್ಕ ಹೊಂದಿರುವ ಅವರ ನಾಯಕತ್ವದಿಂದ ಮುಂದಿನ ದಿನಗಳಲ್ಲಿ ಬಿಜೆಪಿಯ ಸಂಘಟನಾ ಬಲ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
೧೯೮೦ರಲ್ಲಿ ಸ್ಥಾಪನೆಯಾದ ಬಿಜೆಪಿಯ ೧೨ನೇ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಬಿನ್, ಕೇವಲ ೪೫ನೇ ವಯಸ್ಸಿಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕೇಂದ್ರ ಸಚಿವರಾಗಿದ್ದ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ನಡೆದ ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ನಿತಿನ್ ನಬಿನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಬಿಹಾರದಲ್ಲಿ ಸಂಖ್ಯಾತ್ಮಕವಾಗಿ ಸಣ್ಣ ಗುಂಪಾದ ಕಾಯಸ್ಥ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಉನ್ನತಿಯು ಜಾತಿ ಲೆಕ್ಕಾಚಾರಕ್ಕಿಂತ ಸಂಘಟನಾ ಸಾಮಥ್ರ್ಯಕ್ಕೆ ಬಿಜೆಪಿ ನಾಯಕತ್ವದ ಆದ್ಯತೆಯನ್ನು ಒತ್ತಿ ಹೇಳುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ನಿತಿನ್ ನಬಿನ್ ಬಿಹಾರದ ಕ್ಯಾಬಿನೆಟ್ ಸಚಿವರಾಗಿದ್ದು, ಅವರು ೪೫ ವರ್ಷ ವಯಸ್ಸಿನವರಾಗಿದ್ದು, ಬಿಜೆಪಿಯ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ನಿತಿನ್ ಗಡ್ಕರಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.ನಬಿನ್ ಅವರು ಬಿಹಾರದ ಬಿಜೆಪಿಯ ಬಲಿಷ್ಠ ನಗರ ಕ್ಷೇತ್ರಗಳಲ್ಲಿ ಒಂದಾದ ಪಾಟ್ನಾದ ಬಂಕಿಪುರದಿಂದ ಐದು ಬಾರಿ ಶಾಸಕರಾಗಿದ್ದಾರೆ.ಹೊಸ ಬಿಜೆಪಿ ಮುಖ್ಯಸ್ಥರು ಪ್ರಸ್ತುತ ಬಿಹಾರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ಅವರ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಶೈಲಿ ಮತ್ತು ಅಮಿತ್ ಶಾ ಅವರ ಸಾಂಸ್ಥಿಕ ಸಲಹೆಗಳೊಂದಿಗೆ ನಿಕಟ ಸಂಬಂಧವಿದೆ.ಅವರು ಬಲವಾದ ರಾಜಕೀಯ ವಂಶಾವಳಿಯಿಂದ ಬಂದವರು ಮತ್ತು ೨೦೦೬ ರಲ್ಲಿ ನಿಧನರಾದ ಹಿರಿಯ ಬಿಜೆಪಿ ನಾಯಕ ನಬಿನ್ ಕಿಶೋರ್ ಸಿನ್ಹಾ ಅವರ ಪುತ್ರರಾಗಿದ್ದಾರೆ, ನಂತರ ನಬಿನ್ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ನಬಿನ್ ತಮ್ಮ ರಾಜಕೀಯ ಪ್ರಯಾಣವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಪ್ರಾರಂಭಿಸಿದರು ಮತ್ತು ನಂತರ ಬಿಜೆಪಿಯ ಯುವ ವಿಭಾಗದ ಮೂಲಕ ಎತ್ತರಕ್ಕೆ ಏರಿದವರು ಎಂದರು.
ಬಿಜೆಪಿ ಯುವ ಮುಖಂಡರಾದ ಡಾ.ಸಿದ್ದಾರ್ಥ ಗುಂಡಾರ್ಪಿ, ನಗರಾಧ್ಯಕ್ಷ ಲೋಕೇಶ್, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ರೈತ ಮೋರ್ಚಾದ ಅಧ್ಯಕಗ್ಷ ವೆಂಕಟೇಶ್ ಯಾದವ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಸಿದ್ದೇಶ್ ರೇಖಾ ಬಸಮ್ಮ, ಸುಮಾ ಕವಿತ, ಸಿಂಧು ತನಯ, ನಿವೀನ್, ಕಿರಣ್ ಮಹಂತೇಶ್, ಅರುಣ್, ಚಂದ್ರಶೇಖರ್ ಬಸುರಾಜು ಛಲವಾದಿ ತಿಪ್ಪೇಸ್ವಾಮಿ ಬಸುವೇಶ್ ವಸಂತಚಾರ್ ಶಂಭು ಸೇರಿದಂತೆ ಇತರರು ಭಾಗವಹಿಸಿದ್ದರು.


