Tuesday, November 4, 2025

ಬಿಹಾರದಲ್ಲಿ ನಿತೀಶ್‌ಗೆ ಗದ್ದುಗೆ, ಕೇಂದ್ರದಲ್ಲಿ ಮೋದಿಗೇ ಪಟ್ಟ! ಅಮಿತ್ ಶಾ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದಲ್ಲಿ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲಕ್ಕೆ ಸ್ಪಷ್ಟ ತೆರೆ ಎಳೆದಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಇಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಅಲ್ಲಿ ಪ್ರಧಾನಮಂತ್ರಿ ಹುದ್ದೆಯೂ ಖಾಲಿ ಇಲ್ಲ. ಇಲ್ಲಿ ನಿತೀಶ್ ಕುಮಾರ್ ಇದ್ದಾರೆ, ಅಲ್ಲಿ ಮೋದಿ ಇದ್ದಾರೆ,” ಎಂದು ಘೋಷಿಸಿದರು. ಈ ಮೂಲಕ, ಮುಂಬರುವ ಚುನಾವಣೆಯ ನಂತರವೂ ನರೇಂದ್ರ ಮೋದಿ ಪ್ರಧಾನಿಯಾಗಿ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿದರು.

ಕರ್ಪೂರಿ ಠಾಕೂರ್‌ಗೆ ‘ಭಾರತ ರತ್ನ’:

ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿದ್ದಕ್ಕಾಗಿ ಅಮಿತ್ ಶಾ ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದರು. ಈ ನಿರ್ಧಾರವು ಬಿಹಾರದ ಕೊಡುಗೆಗೆ ಕೇಂದ್ರದ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ಮೋದಿ ‘ಆಪರೇಷನ್ ಸಿಂಧೂರ್’ ಪ್ರಾರಂಭಿಸಿ, ಪಿಎಫ್‌ಐ ಅನ್ನು ನಿಷೇಧಿಸಿ ಅದರ ಸದಸ್ಯರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಶಾ ಉಲ್ಲೇಖಿಸಿದರು.

ರಾಮಮಂದಿರ ಮತ್ತು ಸೀತಾಮಂದಿರದ ಭರವಸೆ:

ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ಇದಕ್ಕೆ ಅವಕಾಶ ನೀಡಲಿಲ್ಲ, ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಆ ಭರವಸೆ ಈಡೇರಿಸಿದ್ದಾರೆ ಎಂದರು. ಇದೀಗ, ಮಿಥಿಲಾದಲ್ಲಿ ಸೀತಾ ದೇವಿಗೆ ದೇವಾಲಯವನ್ನು ನಿರ್ಮಿಸುವ ಭರವಸೆ ನೀಡಿದರು.

ಚುನಾವಣಾ ಮನವಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು ನೀಡುವಂತೆ ಅವರು ಜನರಲ್ಲಿ ಮನವಿ ಮಾಡಿದರು.

error: Content is protected !!