ಹೊಸದಿಗಂತ ವರದಿ ಮಡಿಕೇರಿ:
ಹುಬ್ಬಳ್ಳಿಯಲ್ಲಿ ತೀರಾ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಹೊರತು ರಾಮಭಕ್ತರನ್ನು ಗುರಿಯಾಗಿಸಿ ಕ್ರಮ ಕೈಗೊಂಡಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಭೋಸರಾಜು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವುದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸೇರಿದಂತೆ ಬಿಜೆಪಿಯೇ ಹೊರತು ನಾವಲ್ಲ ಎಂದು ಟೀಕಿಸಿದರು.
ಜಾರಿ ನಿರ್ದೇಶನಾಲಯ ಸೇರಿದಂತೆ ಸರ್ಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿರುವುದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಇದುವರೆಗೂ ಈ ಪರಿಯ ದ್ವೇಷದ ರಾಜಕಾರಣ ಮಾಡಿಲ್ಲ. ವಿರೋಧ ಪಕ್ಷದ ನಾಯಕರಿಗೆ ಗೌರವ ಕೊಟ್ಟಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನದ ಕುರಿತು ಬಿಜೆಪಿಯ ಒಬ್ಬರೂ ಮಾತನಾಡುವುದಿಲ್ಲ. ಆದರೆ ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ಮಾತ್ರ ಅವರು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ರಾಮಮಂದಿರದ ಪರ: ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ನಾವು ರಾಮಮಂದಿರದ ಪರವಾಗಿದ್ದೇವೆ. ಮುಖ್ಯಮಂತ್ರಿಯವರೂ ಇದನ್ನೇ ಹೇಳಿದ್ದಾರೆ. ನಾನೂ ಇದನ್ನೇ ಹೇಳುತ್ತಿದ್ದೇನೆ ಎಂದು ನುಡಿದರು.
ಬಿಜೆಪಿಯವರು ರಾಜಕೀಯಕ್ಕಾಗಿ ಸಹಜವಾಗಿ ಆರೋಪ ಮಾಡುತ್ತಾರೆ. ಆದರೆ ಕಾನೂನು ಬೇರೆ, ರಾಜಕೀಯ ಬೇರೆ. ಬಿಜೆಪಿ ಆಡಳಿತ ನಡೆಸುತ್ತಿದ್ದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಲಿಲ್ಲ. ಯಾವುದೇ ರೀತಿಯ ಅಪರಾಧದ ಪರಾಮರ್ಶೆ ನಡೆದಿರಲಿಲ್ಲ. ಈಗ 31 ವರ್ಷಗಳಿಂದ ಇದ್ದ ಪ್ರಕರಣಗಳಿಗೆ ಅಂತ್ಯ ಹಾಡಲು ಕ್ರಮ ಕೈಗೊಳ್ಳಬೇಕಿದೆ. ಕರಸೇವಕರನ್ನು ಬಂಧಿಸಬೇಕು ಅಂತ ಯಾರೂ ಯಾರನ್ನೂ ಬಂಧಿಸಿಲ್ಲ. ಕಾನೂನು ಪ್ರಕ್ರಿಯೆಗಳಿಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಪೊನ್ನಣ್ಣ ಹೇಳಿದರು.