ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಪಕ್ಷಗಳು ಮುಂದಾಗಿದ್ದು, ಮಾ. 9-11ರ ತನಕ ಸಂಸತ್ ಅಧಿವೇಶನದಲ್ಲಿ ಕಡ್ಡಾಯ ಹಾಜರಿರುವಂತೆ ಈಗಾಗಲೇ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿಗೊಳಿಸಿದೆ.
ಈ ನಡುವೆ ಕಾಂಗ್ರೆಸ್‌ಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಈ ಮೊದಲು ಟಿಎಂಸಿ ಸಂಸದರು ಅವಿಶ್ವಾಸ ನಿರ್ಣಯ ಸೂಚನೆಗೆ ಸಹಿ ಹಾಕಿರಲಿಲ್ಲ. ಆರಂಭದಲ್ಲಿ ಟಿಎಂಸಿ ನೇರವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಬದಲು, ಮೊದಲು ಸ್ಪೀಕರ್‌ಗೆ ಪತ್ರ ಬರೆದು ಮೂರು ದಿನಗಳ ಕಾಲಾವಕಾಶ ನೀಡಬೇಕು ಎಂದು ವಾದಿಸಿತ್ತು.
ಇದೀಗ ಅನಾರೋಗ್ಯಕ್ಕೆ ಒಳಗಾದವರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಟಿಎಂಸಿ ಸಂಸದರು, ಸೋಮವಾರ ಅವಿಶ್ವಾಸ ನಿರ್ಣಯವನ್ನು ಪರಿಗಣಿಸುವಾಗ ಲೋಕಸಭೆಯಲ್ಲಿ ಹಾಜರಿರುವರು. ಈ ವಿಚಾರದಲ್ಲಿ ಇಂಡಿಯಾ ಬಣದ ನಾಯಕರೊಂದಿಗೆ ಟಿಎಂಸಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾರ ಅವರ ಪದಚ್ಯುತಿ ಕೋರಿ ಸಲ್ಲಿಸಲಾಗಿರುವ ನೋಟಿಸ್ ಸೋಮವಾರ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ಈ ಸಂದರ್ಭದಲ್ಲಿ ಸ್ಪೀಕರ್ ಬಿರ್ಲಾ ಅವರು ಸದನದಲ್ಲಿ ಹಾಜರಾಗಲು ಸಂವಿಧಾನವು ಅವಕಾಶ ನೀಡುತ್ತದೆ. ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳಬಹುದು ಮತ್ತು ನಿರ್ಣಯದ ಮೇಲೆ ಮತ ಹಾಕಬಹುದು ಆದರೆ ವಿಷಯದ ಚರ್ಚೆಯ ಸಮಯದಲ್ಲಿ ಸ್ಪೀಕರ್ ಪೀಠದಲ್ಲಿ ಕೂರುವಂತಿಲ್ಲ.



