ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಕದನ ವಿರಾಮದ ಭವಿಷ್ಯದ ಕುರಿತು ಮಾತುಕತೆ ಇಂದು ಮಧ್ಯಾಹ್ನ ಸಭೆ ನಡೆಯಲು ನಿರ್ಧಾರವಾಗಿತ್ತು. ಆದರೆ ಈ ಸಭೆಯನ್ನು ಸಂಜೆಗೆ ಮುಂದೂಡಲಾಗಿದೆ.
ಇದರ ನಡುವೆ ಮಿಲಿಟರಿ ಕಾರ್ಯಾಚರಣೆಗಳ ಉನ್ನತ ಮಹಾನಿರ್ದೇಶಕರು (ಡಿಜಿಎಂಒಗಳು) ಮತ್ತು ಹಿರಿಯ ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಭಾರತದ ಅಧಿಕಾರಿಗಳು ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕಾದ ಹಾನಿಯನ್ನು ವೀಡಿಯೋ ಹಾಗೂ ಫೋಟೋಗಳ ಸಮೇತ ಇಂಚಿಂಚು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡೈರೆಕ್ಟರ್ ಜನರಲ್ ಆಫ್ ಏರ್ ಆಪರೇಷನ್ ಅವಧೇಶ್ ಕುಮಾರ್ ಭಾರ್ತಿ ಅವರು ಮಾತನಾಡಿ, ಭಾರತ, ಪಾಕ್ ಸಂಘರ್ಷದಲ್ಲಿ ಆಪರೇಷನ್ ಸಿಂಧೂರಕ್ಕೆ ಅತಿ ದೊಡ್ಡ ಯಶಸ್ಸು ಸಿಕ್ಕಿದೆ. ಭಾರತದ DGMO ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ಸೇನಾ ಕಾರ್ಯಾಚರಣೆಯ ರೋಚಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡೈರೆಕ್ಟರ್ ಜನರಲ್ ಆಫ್ ಏರ್ ಆಪರೇಷನ್ ಅವಧೇಶ್ ಕುಮಾರ್ ಭಾರ್ತಿ ಅವರು ಮಾತನಾಡಿ, ಪಾಕಿಸ್ತಾನದ ರಹೀಮ್ ಯಾರ್ ಖಾನ್ ಏರ್ ಬೇಸ್ ರನ್ ವೇನಲ್ಲಿ ನಮ್ಮ ದಾಳಿಯಿಂದ ಭಾರೀ ಗುಂಡಿ ಬಿದ್ದಿದೆ. ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ವೈರಿಗಳ ಡ್ರೋಣ್, ಮಿಸೈಲ್‌ಗಳನ್ನ ಹೊಡೆದುರುಳಿಸಿ ನಮ್ಮ ಕಡೆ ಕನಿಷ್ಠ ಹಾನಿಯಾಗುವಂತೆ ಮಾಡಿವೆ ಎಂದು ಹೇಳಿದ್ದಾರೆ.
ಡಿಜಿಎಂಓ ರಾಜೀವ್ ಘಾಯ್ ಅವರು ಮಾತನಾಡಿ, ನಾವು ಏರ್‌ಪೋರ್ಸ್ ಜೊತೆ ಸೇರಿ ದಾಳಿ ನಡೆಸಿದ್ದೇವೆ. ಪಾಕಿಸ್ತಾನ ಏರ್ ಪೋರ್ಸ್ ನಮ್ಮ ಮೇಲೆ ಮೇ 9, 10ರಂದು ದಾಳಿ ನಡೆಸಿದಾಗ ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ಮುಂದೆ ಸಂಪೂರ್ಣ ವಿಫಲವಾಗಿದೆ.ನಮ್ಮ ರಾಡಾರ್, ವಿಂಟೇಜ್ ಏರ್ ಡಿಫೆನ್ಸ್ ಸಿಸ್ಟಮ್, ಮಾರ್ಡನ್ ಏರ್ ಡಿಫೆನ್ಸ್ ಸಿಸ್ಟಮ್ ಮುಂದೆ ಪಾಕಿಸ್ತಾನಕ್ಕೆ ಯಾವುದೇ ಅವಕಾಶ ಸಿಗಲಿಲ್ಲ. ಪಾಕ್‌ಗೆ ನಮ್ಮ ಮೇಲೆ ದಾಳಿ ಮಾಡಲು ಯಾವುದೇ ಅವಕಾಶ ಸಿಗಲಿಲ್ಲ ಎಂದರು.
ಬಿಎಸ್‌ಎಫ್ ಕೂಡ ನಮ್ಮ ಅಭಿಯಾನದಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಾರೆ. ಪಾಕಿಸ್ತಾನದ ಎಲ್ಲಾ ದುಷ್ಕೃತ್ಯಗಳನ್ನು ವಿಫಲಗೊಳಿಸಿದ್ದೇವೆ. ಆಪರೇಷನ್ ಸಿಂದೂರನಲ್ಲಿ ಮೂರು ಸೇನೆಗಳ ನಡುವೆ ಉತ್ತಮ ಸಮನ್ವಯತೆ ಇತ್ತು. ನಮ್ಮ ಸರ್ಕಾರ ಉತ್ತಮವಾಗಿ ಬೆಂಬಲಿಸಿದೆ. 140 ಕೋಟಿ ಜನರು ಬೆಂಬಲಿಸಿ, ಸ್ಫೂರ್ತಿ ತುಂಬಿದ್ದಾರೆ ಎಂದು ಡಿಜಿಎಂಓ ರಾಜೀವ್ ಘಾಯ್ ತಿಳಿಸಿದ್ದಾರೆ.
ವೈರಿರಾಷ್ಟ್ರಗಳ ಯಾವುದೇ ಯುದ್ಧ ವಿಮಾನ ಭಾರತದ ಬಳಿ ಸುಳಿದಿಲ್ಲ. ಭಾರತದ ಜಲ ಪ್ರದೇಶದ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ಭಾರತೀಯ ನೌಕೆಗಳಲ್ಲಿ ಮಿಗ್-29 ಸಿದ್ಧವಾಗಿವೆ ಎಂದು ಡಿಜಿ ನೇವಿ ಎ.ಎನ್ ಪ್ರಮೋದ್ ತಿಳಿಸಿದರು.
ಪಾಕಿಸ್ತಾನದ ನ್ಯೂಕ್ಲಿಯರ್ ಅಸ್ತ್ರಗಳು ಇರುವ ಕಿರಣಾ ಹಿಲ್ ಮೇಲೆ ನಾವು ದಾಳಿ ಮಾಡಿಲ್ಲ. ಕಿರಣಾ ಹಿಲ್‌ನಲ್ಲಿ ಏನಿದೆ ಎಂಬುದೇ ನಮಗೆ ಗೊತ್ತಿಲ್ಲ. ಪಾಕ್, ಟರ್ಕಿ ಡ್ರೋಣ್‌ಗಳನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಎ.ಕೆ.ಭಾರ್ತಿ ಅವರು ಸ್ಪಷ್ಟಪಡಿಸಿದ್ದಾರೆ.