ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳ ಪ್ರವೇಶವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿಷೇಧಿಸಿದೆ . ಭಾನುವಾರ ರಾತ್ರಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಸಂಭವಿಸಿದ ಮೊದಲಅಪಘಾತದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ ಇದೀಗ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ಬೈಕ್‌ಗಳ ಪ್ರವೇಶವನ್ನು ನಿಷೇಧಿಸಲು ಗಸ್ತು ವಾಹನಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್‌ಗಳ ಬಳಕೆಯನ್ನು ನಿಷೇಧಿಸಲು ಸೈನ್‌ಬೋರ್ಡ್‌ಗಳನ್ನು ಅಳವಡಿಸಲಾಗುವುದು ಎಂದು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈವೇಗೆ ಬೈಕ್ ತಪ್ಪಾದ ಕಡೆಯಿಂದ ಪ್ರವೇಶಿಸಿ ನಾಲ್ಕು ಚಕ್ರದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹೀಗಾಗಿ, ಬೈಕ್ ಸವಾರನ ತಪ್ಪಿನಿಂದಲೇ ಈ ಕೃತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ದೇಶದ ಯಾವುದೇ ಎಕ್ಸ್‌ಪ್ರೆಸ್‌ವೇಗಳಲ್ಲಿ ಬೈಕ್ ಪ್ರವೇಶವನ್ನು ನಿಷೇಧಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ಈ ಎಕ್ಸ್‌ಪ್ರೆಸ್‌ವೇ ಬಳಸದಂತೆ ನಾವು ಒತ್ತಾಯಿಸುತ್ತೇವೆ. ಎಕ್ಸ್‌ಪ್ರೆಸ್‌ವೇಗಳನ್ನು ಗರಿಷ್ಠ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇತರ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಬೈಕ್ ಸವಾರರು ಈ ಮಾರ್ಗವನ್ನು ಬಳಸುವುದು ಸುರಕ್ಷಿತವಲ್ಲ. ಬೈಕ್ ಸವಾರರು ತಮ್ಮ ಜೀವ ಮತ್ತು ಇತರ ವಾಹನ ಸವಾರರನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ. ಈ ರಸ್ತೆಯಲ್ಲಿ ಪೂರ್ಣಗೊಂಡ ಭಾಗದಲ್ಲಿ ವಾಹನ ಚಾಲಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಾಗ, ಅನೇಕ ಬೈಕ್ ಸವಾರರು ಹೊಸ ಅನುಭವಕ್ಕಾಗಿ ಈ ಹೈವೇಗೆ ಬಂದಿದ್ದಾರೆ. ಆದರೆ, ಜೀವಗಳು ಅಮೂಲ್ಯ. ಬೈಕ್ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡಬಾರದು ಎಂದು ಎನ್‌ಎಚ್‌ಐಎ ಅಧಿಕಾರಿ ಹೇಳಿದರು.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ 68 ಕಿ.ಮೀ. ಮಾರ್ಗವನ್ನು ಕಳೆದ ತಿಂಗಳು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕಾಗಿ ತೆರೆಯಲಾಯಿತು. ಕರ್ನಾಟಕದಲ್ಲಿ 71 ಕಿ.ಮೀ. ಎಕ್ಸ್‌ಪ್ರೆಸ್‌ವೇ ಮಾರ್ಗದ ನಿರ್ಮಾಣವನ್ನು ಎನ್‌ಎಚ್‌ಎಐ ಪೂರ್ಣಗೊಳಿಸಿದೆ. ಹೊಸಕೋಟೆಯಿಂದ ಚೆನ್ನೈ ಬಳಿಯ ಶ್ರೀಪೆರಂಬುದೂರಿನವರೆಗಿನ 260 ಕಿ.ಮೀ. ವ್ಯಾಪ್ತಿಯ ಉಳಿದ ಭಾಗವು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವ್ಯಾಪ್ತಿಗೆ ಬರುತ್ತದೆ. ಅದು ಈ ವರ್ಷಾಂತ್ಯದ ವೇಳೆಗೆ ತೆರೆಯುವ ಸಾಧ್ಯತೆಯಿದೆ. ಕರ್ನಾಟಕದ ಮಿತಿಯೊಳಗೆ, ಈ ಎಕ್ಸ್‌ಪ್ರೆಸ್‌ವೇ ಜನರು ಹೊಸಕೋಟೆ, ಮಾಲೂರು, ಕೆಜಿಎಫ್ ಮತ್ತು ಇತರ ಸ್ಥಳಗಳನ್ನು ತಲುಪಲು ಸಹಾಯ ಮಾಡುತ್ತದೆ.