ದಿಗಂತ ವರದಿ ರಾಯಚೂರು :
ನನ್ನ ಪತಿ ಸಾವಿನ ಕುರಿತು ನ್ಯಾಯ ಸಮ್ಮತವಾಗಿ ತನಿಖೆ ಆಗಬೇಕಾದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಯಾದಗಿರಿ ಶಾಸಕರು ಅವರ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು. ಶಾಸಕ ಹಾಗೂ ಅವರ ಪುತ್ರನ ಬಂಧನವಾಗಬೇಕು ಎಂದು ಮೃತ ಯಾದಗಿರಿ ಪಿಎಸ್‌ಐ ಪರಶುರಾಮ ಪತ್ನಿ ಶ್ವೇತಾ ಆಗ್ರಹಿಸಿದರು.
ನಗರದಲ್ಲಿರುವ ತವರು ಮನೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಮಗೆ ಅನ್ಯಾಯವಾಗಿದೆ. ನ್ಯಾಯ ದೊರೆಯಬೇಕಾದರೆ ಮೊದಲು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಮತ್ತು ಪುತ್ರ ಸನ್ನಿರಡ್ಡಿ ತುನ್ನೂರು ಅವರ ಬಂಧನವಾಗಬೇಕು. ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಸಿಐಡಿ ಮೇಲೆ ನಮಗೆ ನಂಬಿಕೆಯಿಲ್ಲ ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಅಮದಾಗ ಮಾತ್ರ ನ್ಯಾಯ ಸಮ್ಮತ ತನಿಖೆ ಆಗಲು ಸಾಧ್ಯ ಎಂದು ಹೇಳಿದರು.
ನನ್ನ ಪತಿಗೆ ಯಾದಗಿರಿ ಶಾಸಕ ಹಾಗೂ ಅವರ ಪುತ್ರ ತುಂಬಾ ಕಿರುಕುಳ ಕೊಡುತ್ತಿದ್ದರು ಮತ್ತೆ ಹಣ ಕೊಡು ಎಂದು ಕೇಳುತ್ತಿದ್ದಾರೆ ಎಲ್ಲಿಂದ ಕೊಡಲಿ ಎಂದು ನನಗೆ ನನ್ನ ಪತಿ ಹೇಳಿದ್ದರು. ಕಡಿಮೆ ಕುಲದವರು ನಮ್ಮ ಮುಂದೆ ನಿಂತು ಮಾತನಾಡಲು ಎಷ್ಟು ಧೈರ್ಯ ಅಂತ ನಿಂದನೆ ಮಾಡಿದ್ದರು. ಯಾದಗಿರಿಗೆ ಬರುವ ಮುಂಚೆನೆ ೨೦ ಲಕ್ಷ ಪೋಸ್ಟಿಂಗ್‌ಗೆ ಕೊಟ್ಟಿದ್ದಾರೆ. ಈಗ ಪುನಃ ೩೦ ಲಕ್ಷ ಕೊಡಬೇಕು ಅಂದ್ರೆ ಹೇಗೆ ಅಂತ ಪ್ರಶ್ನಿಸಿದರು.
ಯಾದಗಿರಿಗೆ ಬಂದು ಕೇವಲ ೭ ತಿಂಗಳಾಗಿತ್ತು ಇನ್ನು ಟೈಮ್ ಪೀರಿಯಡ್ ಮುಗಿಯದಿದ್ದರು ದುಡ್ಡು ಕೇಳಿದರೆ ಎಷ್ಟಂತ ಕೊಡಲು ಸಾಧ್ಯ. ಎಷ್ಟು ಸಾರಿ ದುಡ್ಡು ಕೊಡಲು ಸಾಧ್ಯ. ದುಡ್ಡು ತಗೊಂಡೆ ಎಂಎಲ್‌ಎ ಇಲ್ಲಿ ಎಲ್ಲರಿಗೂ ವರ್ಗಾವಣೆ ಕೊಟ್ಟಿದ್ದಾರೆ. ಯಾದಗಿರಿಯಲ್ಲಿರುವ ಸಿಪಿಐ, ಡಿವೈಎಸ್‌ಪಿ ಎಲ್ಲರೂ ದುಡ್ಡು ಕೊಟ್ಟೆ ಪೊಸ್ಟಿಂಗ್ ನಲ್ಲಿದ್ದಾರೆ. ಎಲ್ಲರೂ ದುಡ್ಡು ಕೊಟ್ಟೆ ಪೊಸ್ಟಿಂಗ್ ತಗೊಂಡಿದ್ದಾರೆ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ನನ್ನ ಪತಿ ಸಾವು ಸಂಶಯಾಸ್ಪದವಾಗಿದೆ ಎಂದು ದೂರು ಕೊಡಲು ಮುಂದಾದರೂ ಎಫ್‌ಐಆರ್ ಮಾಡಲಿಲ್ಲ. ಮಲ್ಲಿಕಾರ್ಜುನ್ ಖರ್ಗೆಯವರು ಫೋನ್ ಮಾಡಿ ಹೇಳಿದರು ಎಫ್‌ಐಆರ್ ಮಾಡಲಿಲ್ಲ. ೧೮ ಗಂಟೆ ನಾವು ಕಾಯಾಬೇಕಾಯಿತು. ಸಿಐಡಿ ಬಂದಿದ್ದಾರೆ ಅಂತ ಗೊತ್ತಾಗಿದೆ. ಸಿಐಡಿ ತನಿಖೆ ಇನ್ನೂ ಶುರುಮಾಡಿಲ್ಲ. ಬೇಗ ರಿಸಲ್ಟ್ ಕೊಡುತ್ತಾರೆ ಅಂತ ನಮಗೆ ನಂಬಿಕೆಯಿಲ್ಲ. ಹೀಗಾಗಿ ಸಿಐಡಿ ಬದಲು ಸಿಬಿಐಗೆ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.