October 9, 2026
Friday, October 9, 2026
spot_img

ಬಯೋಮೆಟ್ರಿಕ್ ಆಧಾರ್ ಇಲ್ಲದೆ GST ನೋಂದಣಿ ಬೇಡ: ದೆಹಲಿ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಂಚನೆಯ ಮೂಲಕ ಪಡೆಯಲಾಗುತ್ತಿರುವ ಜಿಎಸ್‌ಟಿ ನೋಂದಣಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಅರ್ಜಿದಾರರು ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ಪೂರ್ಣಗೊಳಿಸದಿದ್ದರೆ ಯಾವುದೇ ಹೊಸ ಜಿಎಸ್‌ಟಿ ನೋಂದಣಿ ನೀಡಬಾರದು ಎಂದು ದೇಶಾದ್ಯಂತ ಜಿಎಸ್‌ಟಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅನಿಲ್ ಖೇತರಪಾಲ್ ಹಾಗೂ ಶೈಲ್ ಜೈನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ನಕಲಿ ಜಿಎಸ್‌ಟಿ ನೋಂದಣಿ ಹೆಚ್ಚಾಗಿದೆ

ಅಪರಿಚಿತ ವ್ಯಕ್ತಿಗಳ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳುವ ಪ್ರಕರಣಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

ರಾಜ್ಯಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ನೀಡಿದ್ದ ಮಾಹಿತಿಯನ್ನು ನ್ಯಾಯಾಲಯ ಉಲ್ಲೇಖಿಸಿದೆ. ಅದರಂತೆ, 2023-24ನೇ ಸಾಲಿನಲ್ಲಿ ಕಳವುಗೊಂಡ ಅಥವಾ ಫ್ರೀಜ್ ಮಾಡಲಾಗಿದ್ದ ಪ್ಯಾನ್ ಹಾಗೂ ಆಧಾರ್ ವಿವರಗಳನ್ನು ಬಳಸಿ 2,800 ವಂಚಕ ಜಿಎಸ್‌ಟಿ ನೋಂದಣಿಗಳು ಪತ್ತೆಯಾಗಿದ್ದು, ಇದರಿಂದ 15,085 ಕೋಟಿ ತೆರಿಗೆ ವಂಚನೆ ನಡೆದಿತ್ತು. 2024-25ರಲ್ಲಿ ಇಂತಹ 1,654 ನೋಂದಣಿಗಳು ಪತ್ತೆಯಾಗಿದ್ದು, 13,109 ಕೋಟಿ ತೆರಿಗೆ ವಂಚನೆಗೆ ಸಂಬಂಧಿಸಿದ್ದವು.

ಇದನ್ನೂ ಓದಿ:

ಒಂದು ವರ್ಷವಾದ್ರೂ ಜಾರಿಗೆ ಬಂದಿಲ್ಲ

ಜಿಎಸ್‌ಟಿ ನೋಂದಣಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರ ಈ ಹಿಂದೆ ಸಂಸತ್ತಿನಲ್ಲಿ ತಿಳಿಸಿತ್ತು. ಆದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಈ ಕ್ರಮ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವಲ್ಲಿ ಯಾವುದೇ ಪ್ರಾಯೋಗಿಕ ಸಮಸ್ಯೆಯಿದೆ ಎಂಬುದನ್ನು ಅಧಿಕಾರಿಗಳ ಪರ ವಕೀಲರು ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ ಎಂದು ಪೀಠ ಹೇಳಿದೆ. ಹೀಗಾಗಿ, ಇನ್ನು ಮುಂದೆ ಬಯೋಮೆಟ್ರಿಕ್ ಆಧಾರ್ ದೃಢೀಕರಣವಿಲ್ಲದೆ ದೇಶದ ಯಾವುದೇ ಭಾಗದಲ್ಲೂ ಜಿಎಸ್‌ಟಿ ನೋಂದಣಿ ಮಾಡಬಾರದು ಎಂದು ನಿರ್ದೇಶಿಸಿದೆ.

Must Read