ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಮೆಂಟ್ ಪ್ರಾರಂಭವಾಗಿರುತ್ತಿದ್ದಂತೆಯೇ ಭಾರತ–ಪಾಕಿಸ್ತಾನದ ನಡುವೆ ನಡೆಯಲಿರುವ ಪಂದ್ಯದಿಂದ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಿಂದೆ ಸರಿದಿದ್ದಾರೆ. ಈ ನಿರ್ಧಾರಕ್ಕೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಅದರ ನಂತರದ ರಾಜಕೀಯ ಮತ್ತು ಸಾರ್ವಜನಿಕ ಆಕ್ರೋಶವೇ ಪ್ರಮುಖ ಕಾರಣವಾಗಿದೆ.
ಹರ್ಭಜನ್ ಮಾತ್ರವಲ್ಲ, ಪಠಾಣ್ ಸಹೋದರರಾದ ಇರ್ಫಾನ್ ಪಠಾನ್ ಮತ್ತು ಯೂಸುಫ್ ಪಠಾನ್ ಕೂಡಾ ಇದೇ ರೀತಿಯ ನಿರ್ಧಾರ ಕೈಗೊಂಡಿದ್ದಾರೆ. ಜುಲೈ 20 ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಈ ಪಂದ್ಯ ನಡೆಯಬೇಕಿತ್ತು. ಆದರೆ, ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆಯ ನಡುವೆ ಈ ಪಂದ್ಯದಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ ಎಂಬ ನಿಲುವಿಗೆ ಕೆಲ ಕ್ರಿಕೆಟಿಗರು ಬಂದಿದ್ದಾರೆ. “ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ” ಎಂಬ ಕಾರಣವನ್ನು ಹರ್ಭಜನ್ ತಮ್ಮ ನಿರ್ಧಾರಕ್ಕೆ ಮನ್ನಣೆಯಾಗಿ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತದ ಅಭಿಮಾನಿಗಳು ಪಾಕಿಸ್ತಾನದ ವಿರುದ್ಧ ಆಟವಾಡುತ್ತಿರುವದೇ ತಪ್ಪು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವು ಪ್ರಖ್ಯಾತ ಕ್ರಿಕೆಟಿಗರ ವಿರುದ್ಧವೂ “ದೇಶಭಕ್ತಿಯ ಮಾತು ಆಡೋರು, ಆದರೆ ಲೀಗ್‌ನಲ್ಲಿ ಪಾಕ್ ವಿರುದ್ಧ ಆಡ್ತಾರೆ” ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಈ ಟೂರ್ನಿಯ ಭಾಗವಾಗಿರುವ ಯುವರಾಜ್ ಸಿಂಗ್, ಶಿಖರ್ ಧವನ್, ಸುರೇಶ್ ರೈನಾ, ಇರ್ಫಾನ್ ಪಠಾನ್ ಸೇರಿದಂತೆ ಹಲವರು ಈ ಟೀಕೆಗೆ ಒಳಗಾಗಿದ್ದಾರೆ. ಈ ಎಲ್ಲಾ ಘಟನಾಕ್ರಮದ ನಡುವೆಯೇ ಭಾರತದ ಹೆಡ್ ಕೋಚ್ ಗೌತಮ್ ಗಂಭೀರ್ ಕೂಡ ಪಾಕಿಸ್ತಾನದ ಜೊತೆ ಯಾವುದೇ ರೂಪದ ಕ್ರಿಕೆಟ್ ಪಂದ್ಯಾವಳಿ ನಡೆಸಬಾರದು ಎಂಬ ನಿಲುವು ವ್ಯಕ್ತಪಡಿಸಿದ್ದರು.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ನಿವೃತ್ತ ಕ್ರಿಕೆಟಿಗರಿಗಾಗಿ ನಡೆಸಲಾಗುವ ಖಾಸಗಿ ಟಿ20 ಟೂರ್ನಿಯಾಗಿದೆ. ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ತಂಡಗಳು ಪಾಲ್ಗೊಳ್ಳುತ್ತಿವೆ. ಜುಲೈ 18ರಿಂದ ಆರಂಭವಾದ ಈ ಟೂರ್ನಿಯಲ್ಲಿ ಭಾರತ ತಂಡವನ್ನು ಯುವರಾಜ್ ಸಿಂಗ್ ಮುನ್ನಡೆಸುತ್ತಿದ್ದಾರೆ. ಇವರ ಜೊತೆ ಧವನ್, ರೈನಾ, ಪಠಾನ್ ಸಹೋದರರು, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ ಮೊದಲಾದವರೂ ಇದ್ದಾರೆ.