ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎಂಟು ವರ್ಷಗಳಿಂದ ನಿರೂಪಣೆಯಲ್ಲಿ ನಿರತರಾಗಿದ್ದ ಕನ್ನಡದ ನಟಿ ಅನುಪಮಾ ಗೌಡ ಇದೀಗ ಆಂಕರಿಂಗ್ ವೃತ್ತಿಗೆ ಗುಡ್ಬೈ ಹೇಳಿದ್ದಾರೆ. ತಮ್ಮದೇ ಯುಟ್ಯೂಬ್ ಚಾನೆಲ್ನಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇಷ್ಟು ವರ್ಷ ನನ್ನ ಬೆನ್ನೆಲುಬಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದಗಳು. ಎಂಟು ವರ್ಷಗಳ ಸುದೀರ್ಘ ಪಯಣದ ನಂತರ ನಿರೂಪಣೆ ಕ್ಷೇತ್ರಕ್ಕೆ ಪ್ರೀತಿಯ ವಿದಾಯ ಹೇಳುತ್ತಿದ್ದೇನೆ. ಮುಂದೆ ಬೇರೆ ದಾರಿಗಳಿವೆ ಅಲ್ಲಿಯೂ ನನ್ನನ್ನು ಪ್ರೀತಿಸಿ, ಆಶೀರ್ವದಿಸಿ ಎಂದಿದ್ದಾರೆ.
ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ
ಏನೂ ಗೊತ್ತಿಲ್ಲದೇ ವೇದಿಕೆ ಏರಿದ್ದ ನನಗೆ ಕನ್ನಡ ಕಲಿಸಿ, ನಿಮ್ಮೆಲ್ಲರ ಮುಂದೆ ನಿಲ್ಲುವಷ್ಟು ಆತ್ಮವಿಶ್ವಾಸ ನೀಡಿದ್ದೀರಿ. ನಿರೂಪಣೆಯ ಗಂಧ ಗಾಳಿ ಗೊತ್ತಿಲ್ಲದವಳನ್ನು ಬೆಸ್ಟ್ ಆಂಕರ್ ಎನ್ನುವಂತೆ ಮಾಡಿದ್ದೀರಿ. ಕನ್ನಡಿಗರನ್ನು, ಕನ್ನಡಿಗರು ನೀಡಿದ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಪ್ರೀತಿ ಸದಾ ನನ್ನ ಮೇಲಿರಲಿ ಎಂದಿದ್ದಾರೆ. ಈ ನಿರೂಪಣೆ ಫೀಲ್ಡಿಗೆ ಬಂದಾಗ ಸಾಕಷ್ಟು ಜನರು ನನ್ನನ್ನು ತಿದ್ದಿದ್ದೀರಿ, ಕೈ ಹಿಡಿದಿದ್ದೀರಿ. ಇಂತಹ ಜೀವಗಳನ್ನು ಜೀವನದ ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ. ಅತ್ಯುತ್ತಮ ವ್ಯಕ್ತಿಗಳು ನನಗೆ ಪರಿಚಯವಾಗಿದ್ದು ಇಲ್ಲಿಂದಲೇ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗೋದಿಲ್ಲ ಎಂದಿದ್ದಾರೆ.
ಕಲಾವಿದೆಯ ಹಸಿವು ತಣಿದಿಲ್ಲ
ನನ್ನೊಳಗಿನ ಕಲಾವಿದೆಗೆ ಹಸಿವು ತಣಿದಿಲ್ಲ. ಅವಳನ್ನು ತೃಪ್ತಿಪಡಿಸಲು ಹೊರಟಿದ್ದೇನೆ. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಎಂದು ನಂಬುತ್ತೇನೆ. ಮುಂದೆ ಜೀವನ ಚೆನ್ನಾಗಿದೆ. ಹೊಸ ದಾರಿಯಿದೆ. ವಿದಾಯ ಹೇಳೋದಕ್ಕೆ ಇದು ಬೆಸ್ಟ್ ಸಮಯ. ನಿಮ್ಮೆಲ್ಲರ ಪ್ರೀತಿಯ ಜೊತೆ ನನ್ನಯ ಕಡೆಯ ವಿದಾಯ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.



