June 28, 2026
Sunday, June 28, 2026
spot_img

ಇನ್ಮುಂದೆ ನೋ ಟೆನ್ಷನ್: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಸೀಟುಗಳ ಸಾಮರ್ಥ್ಯ ದ್ವಿಗುಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಕ್ಕೆ ತೆರಳುವ ಐಟಿ ನಗರಿಯ ಪ್ರಯಾಣಿಕರಿಗೆ ದಕ್ಷಿಣ ರೈಲ್ವೆ ಸಿಹಿ ಸುದ್ದಿ ನೀಡಿದೆ. ತೀವ್ರ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.

8 ರಿಂದ 16 ಬೋಗಿಗಳಿಗೆ ಹೆಚ್ಚಳ

ಪ್ರಸ್ತುತ 8 ಬೋಗಿಗಳನ್ನು ಹೊಂದಿರುವ ಈ ಪ್ರೀಮಿಯಂ ರೈಲನ್ನು 16 ಬೋಗಿಗಳಿಗೆ ಹೆಚ್ಚಿಸಲಾಗುತ್ತಿದೆ. ಜುಲೈ ಮೊದಲ ವಾರದಿಂದಲೇ ಈ ಹೊಸ ರೇಕ್ ಸೇವೆಗೆ ಲಭ್ಯವಾಗುವ ಸಾಧ್ಯತೆಯಿದೆ. ಇದರಿಂದಾಗಿ ರೈಲಿನ ಒಟ್ಟು ಆಸನ ಸಾಮರ್ಥ್ಯವು 530 ರಿಂದ 1,128 ಕ್ಕೆ ಏರಿಕೆಯಾಗಲಿದ್ದು, ಪ್ರತಿ ಟ್ರಿಪ್‌ನಲ್ಲಿ 598 ಹೆಚ್ಚುವರಿ ಸೀಟುಗಳು ಸಿಗಲಿವೆ.

ಹಬ್ಬದ ಸೀಸನ್ ರಶ್‌ಗೆ ಬ್ರೇಕ್

ಆಗಸ್ಟ್ 21 ಮತ್ತು 22 ರ ಓಣಂ ಹಬ್ಬದ ಪ್ರಯಾಣದ ಟಿಕೆಟ್‌ಗಳು ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ವೇಟಿಂಗ್ ಲಿಸ್ಟ್ ತಲುಪಿದ್ದವು. ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಉದ್ಯೋಗಿಗಳಿಂದ ಈ ರೈಲಿಗೆ ಭಾರಿ ಬೇಡಿಕೆಯಿದೆ. ವಾರದಲ್ಲಿ 6 ದಿನ ಸಂಚರಿಸುವ ಈ ರೈಲಿನಿಂದಾಗಿ, ಒಂದು ದಿಕ್ಕಿನಲ್ಲಿ ವಾರಕ್ಕೆ 6,768 ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.

9 ನಿಲ್ದಾಣಗಳು, 8 ಗಂಟೆ 40 ನಿಮಿಷಗಳ ಪ್ರಯಾಣ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, 630 ಕಿಲೋಮೀಟರ್ ದೂರದ ಈ ಮಾರ್ಗವನ್ನು ವಂದೇ ಭಾರತ್ ರೈಲು ಕೇವಲ 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತದೆ. ಮಾರ್ಗಮಧ್ಯೆ ಕೇವಲ ಒಂಬತ್ತು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರಲಿದ್ದು, ಹಬ್ಬದ ದಿನಗಳಲ್ಲಿ ಸಾರ್ವಜನಿಕರ ಪ್ರಯಾಣದ ಹೊರೆಯನ್ನು ಇದು ಗಣನೀಯವಾಗಿ ತಗ್ಗಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !