ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ಮುಂಬೈ ಹಾಗೂ ದೆಹಲಿ ಸೇರಿದಂತೆ ಭಾರತದ ಏಳು ಪ್ರಮುಖ ರೈಲು ನಿಲ್ದಾಣಗಳಲ್ಲಿ AI (ಕೃತಕ ಬುದ್ಧಿಮತ್ತೆ) ಆಧಾರಿತ ಬಯೋಮೆಟ್ರಿಕ್ ತಂತ್ರಜ್ಞಾನ ಅಳವಡಿಕೆಯಾಗಲಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ನವದೆಹಲಿಯ ರೈಲು ನಿಲ್ದಾಣ ಸೇರಿ ಕೋಲ್ಕತ್ತಾದ ಹೌರಾ, ಸೀಲ್ದಾಹ್, ಚೆನ್ನೈ ಸೆಂಟ್ರಲ್, ಹೈದ್ರಾಬಾದ್‌ನ ಸಿಕಂದರಾಬಾದ್ ಮತ್ತು ಬಿಹಾರದ ದಾನಾಪುರ ನಿಲ್ದಾಣಗಳಲ್ಲಿ ಈ ತಂತ್ರಜ್ಞಾನ ಆರಂಭವಾಗಲಿದೆ.
ಈ ತಂತ್ರಜ್ಞಾನವು ಭದ್ರತೆಯನ್ನು ಹೆಚ್ಚಿಸುವುದರೊಂದಿಗೆ, ಟಿಕೆಟ್ ಪರಿಶೀಲನೆ ಮತ್ತು ಬೋರ್ಡಿಂಗ್ ಪ್ರಕ್ರಿಯೆಗೂ ಸಹಾಯ ಮಾಡಲಿದೆ. ಮುಖ ಗುರುತಿಸುವಿಕೆ ವ್ಯವಸ್ಥೆ ಮೂಲಕ ಪ್ರಯಾಣಿಕರ ಗುರುತಿನ ದೃಢೀಕರಣವು ವೇಗವಾಗಿ ನಡೆಯುತ್ತದೆ. ಈ ಮೂಲಕ ಟಿಕೆಟ್‌ಗಾಗಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲದೆ, ನಿಲ್ದಾಣದೊಳಗಿನ ಅನಗತ್ಯ ರಶ್ ಕೂಡ ಕಡಿಮೆಯಾಗಲಿದೆ.
AI ಬಯೋಮೆಟ್ರಿಕ್ ತಂತ್ರಜ್ಞಾನವೆಂದರೆ, ವ್ಯಕ್ತಿಯ ಮುಖದ ಲಕ್ಷಣಗಳನ್ನು – ಕಣ್ಣು, ಮೂಗು, ಬಾಯಿ ಮತ್ತು ಇತರ ರಚನೆಗಳನ್ನು ಸ್ಕ್ಯಾನ್ ಮಾಡಿ, ಡೇಟಾಬೇಸ್‌ನಲ್ಲಿ ಹೊಂದಾಣಿಕೆಯಾಗುವವರನ್ನ ಗುರುತಿಸುವ ವಿಧಾನ. ಇದು ಈಗಾಗಲೇ ದೆಹಲಿ, ಬೆಂಗಳೂರು, ಹೈದ್ರಾಬಾದ್‌ನ ವಿಮಾನ ನಿಲ್ದಾಣಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. ಈಗ ಅದೇ ತಂತ್ರಜ್ಞಾನ ರೈಲು ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತಿದೆ.
ಭದ್ರತೆ ದೃಷ್ಟಿಯಿಂದ, ಈ ತಂತ್ರಜ್ಞಾನವು ಶಂಕಿತ ವ್ಯಕ್ತಿಗಳನ್ನು ಗುರುತಿಸಿ, ಅಪರಾಧದ ಮುನ್ಸೂಚನೆ ನೀಡಲು ಸಹಕಾರಿ ಆಗಲಿದೆ. ವಿಶೇಷವಾಗಿ, ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಆರೋಪಿಗಳ ಮುಖ ಗುರುತಿಸಿ ಮಾಹಿತಿ ಒದಗಿಸಲಿದೆ. UIDAI ಪ್ರಕಾರ, ಈ ತಂತ್ರಜ್ಞಾನವನ್ನು ಆಧಾರ್ ಡೇಟಾ ಜೊತೆಗೆ ಬಳಸಲು ಕಾನೂನು ಅನುಮತಿಯ ಅಗತ್ಯವಿದೆ. ಸಾಮಾನ್ಯ ಕಣ್ಗಾವಲಿಗೆ ಆಧಾರ್ ಮಾಹಿತಿ ಬಳಸಲು ಅನುಮತಿ ಇಲ್ಲ.
ಮುಂದಿನ ದಿನಗಳಲ್ಲಿ ಎಲ್ಲ ರೈಲು ನಿಲ್ದಾಣಗಳನ್ನು ಸ್ಮಾರ್ಟ್ ತಂತ್ರಜ್ಞಾನ ಬಳಕೆಯಿಂದ ಭದ್ರ ಹಾಗೂ ಸುಲಭ ಪ್ರಯಾಣದ ಸ್ಥಳಗಳನ್ನಾಗಿ ಪರಿವರ್ತನೆಗೊಳಿಸುವ ಉದ್ದೇಶದಿಂದ ಈ ಯೋಜನೆ ನಡೆಯುತ್ತಿದೆ.