ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ಮನರಂಜನೆಯ ಜಗತ್ತಿನಲ್ಲಿ ಹೆಚ್ಚುತ್ತಿರುವ ಒಟಿಟಿ ವೇದಿಕೆಗಳಲ್ಲಿ ಸೆನ್ಸಾರ್ ಅನಿವಾರ್ಯವೇ ಎಂಬ ಚರ್ಚೆ ವಿಚಾರಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಸಿನಿಮಾಗಳಂತೆ ಒಟಿಟಿ ಸಿನಿಮಾಗಳು ಮತ್ತು ವೆಬ್ ಸರಣಿಗಳಿಗೆ ಸೆನ್ಸಾರ್ ವಿಧಿಸುವ ಅಗತ್ಯವಿಲ್ಲ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.
ಮಕ್ಕಳು ಸುಲಭವಾಗಿ ಮೊಬೈಲ್, ಟಿವಿ ಮೂಲಕ ಒಟಿಟಿ ಕಂಟೆಂಟ್‌ಗಳನ್ನು ವೀಕ್ಷಿಸುವ ಸಾಧ್ಯತೆ ಇರುವುದರಿಂದ, ಸೆನ್ಸಾರ್ ಇಲ್ಲದ ವಿಷಯಗಳು ಅವರ ಮೇಲೆ ದುಷ್ಪ್ರಭಾವ ಬೀರುತ್ತವೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆ ಹಲವರು ಸರ್ಕಾರದ ಬಳಿ ಸೆನ್ಸಾರ್ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಉತ್ತರಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ಸಚಿವ ಎಲ್. ಮುರುಗನ್, 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಈಗಾಗಲೇ ನಿಯಂತ್ರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ವಯಸ್ಸಿನ ಆಧಾರದ ಮೇಲೆ ವಿಷಯಗಳನ್ನು ವರ್ಗೀಕರಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಪೋಷಕರ ನಿಯಂತ್ರಣ ಆಯ್ಕೆಗಳನ್ನೂ ಒಟಿಟಿ ಸಂಸ್ಥೆಗಳು ಒದಗಿಸುತ್ತಿವೆ ಎಂದು ಅವರು ಸ್ಪಷ್ಟಪಡಿಸಿದರು. ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ 43 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಸರ್ಕಾರ ಈಗಾಗಲೇ ನಿಷೇಧಿಸಿರುವುದನ್ನೂ ಸಚಿವರು ಸ್ಮರಿಸಿದರು.
ಇದೇ ವೇಳೆ, ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲತೆ ನಿಯಂತ್ರಣಕ್ಕೆ ಹೊಸ ಮಾನದಂಡಗಳನ್ನು ಜಾರಿಗೊಳಿಸಲಾಗಿದ್ದು, ದೂರುಗಳ ಪರಿಹಾರಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ.

