ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿದ್ದ ಊಹಾಪೋಹಗಳಿಗೆ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಸ್ಪಷ್ಟ ವಿರಾಮ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ ಮತ್ತು ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಅವರು ಘೋಷಿಸಿದ್ದಾರೆ.
ರಾಜ್ಯದ ‘ಕುರ್ಚಿ ಕಿತ್ತಾಟಕ್ಕೆ’ ಬ್ರೇಕ್ ಬಿದ್ದಿರುವ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬದಲಾವಣೆ ಮಾಡುವ ಯಾವುದೇ ವಿಷಯ ಪಕ್ಷದ ಹೈಕಮಾಂಡ್ ಮುಂದೆಯೇ ಇಲ್ಲ. ಈಗ ಕೇಳಿಬರುತ್ತಿರುವ ‘ಅಂತೆ ಕಂತೆ ಮಾತುಗಳು’ ಅನಗತ್ಯ ಎಂದರು. ಅಲ್ಲದೆ, ಪಕ್ಷದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಆಗಾಗ್ಗೆ ‘ಬ್ರೇಕ್ ಫಾಸ್ಟ್ ಮೀಟಿಂಗ್’ಗಳನ್ನು ನಡೆಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಸಮ್ಮಿಶ್ರ ಸರ್ಕಾರದ ಆಡಳಿತದ ಬಗ್ಗೆ ಮಾತನಾಡಿದ ಮಹದೇವಪ್ಪ, ಹೈಕಮಾಂಡ್ ನಿರ್ದೇಶನದಂತೆ ಈ ಸರ್ಕಾರವು ಸಂಪೂರ್ಣ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದೆ. ಅಲ್ಲದೇ, 2028ರ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಸ್ವಾಮೀಜಿಗಳು ನೀಡಿದ ರಾಜಕೀಯ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, “ಕನ್ನೇರಿ ಶ್ರೀಗಳು ಏನು ಹೇಳಿಕೆ ನೀಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ನನಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಮಾತ್ರ ತಿಳಿದಿದೆ,” ಎಂದು ಹೇಳುವ ಮೂಲಕ ಸರ್ಕಾರದ ನಡೆಗೆ ಸಂವಿಧಾನದ ಆಶಯವೇ ಮುಖ್ಯವೇ ಹೊರತು, ಯಾವುದೇ ಹೇಳಿಕೆಗಳಲ್ಲ ಎಂದು ಸ್ಪಷ್ಟಪಡಿಸಿದರು.

