ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲ್ಡೀವ್ಸ್ ವಿರುದ್ಧ ಇಡೀ ಭಾರತವೇ ತಿರುಗಿಬಿದ್ದಿದ್ದು, ‘ಬಾಯ್ಕಾಟ್ ಮಾಲ್ಡೀವ್ಸ್’ ಟ್ರೆಂಡ್ ಆಗುತ್ತಿದೆ. ಭಾರತೀಯರು ಮಾಲ್ಡೀವ್ಸ್ಗೆ ಬದಲಾಗಿ ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಬಳಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದೀಗ ಸಿನಿಮಾರಂಗಕ್ಕೂ ಇದರ ಗಾಳಿ ಬೀಸಿದ್ದು , ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಸಿಬ್ಬಂದಿ ಸಂಸ್ಥೆಯು ನಿರ್ಮಾಣ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ಇನ್ನು ಮುಂದೆ ಮಾಲ್ಡೀವ್ಸ್‌ನಲ್ಲಿ ಯಾವುದೇ ಬಾಲಿವುಡ್ ಸಿನಿಮಾದ ಚಿತ್ರೀಕರಣ ಮಾಡದಂತೆ ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಬಾಲಿವುಡ್ಡಿಗರಿಗಂತೂ ಮಾಲ್ಡೀವ್ಸ್ ಅತ್ಯಂತ ಮೆಚ್ಚಿನ ತಾಣ ಶೂಟಿಂಗ್ ಆಗಲಿ ವಿಶ್ರಾಂತಿಗಾಗಲಿ ಮಾಲ್ಡೀವ್ಸ್ಗೆ ತೆರಳುತ್ತಾರೆ. ಆದರೆ ಈಗ ಬಾಲಿವುಡ್ ಸಹ ‘ಬಾಯ್ಕಾಟ್ ಮಾಲ್ಡೀವ್ಸ್’ಗೆ ಬೆಂಬಲ ಸೂಚಿಸುತ್ತಿದೆ.
ಚಿತ್ರರಂಗದ ಹಳೆಯ ಹಾಗೂ ಬೃಹತ್ ಸಂಸ್ಥೆಯಾಗಿರುವ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಸಿಬ್ಬಂದಿ (ಎಫ್ಡಬ್ಲುಐಸಿಇ) ಮಾಲ್ಡಿವ್ಸ್ ಸಚಿವರು ಪ್ರಧಾನಿ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಆಡಿರುವ ಮಾತುಗಳನ್ನು ಖಂಡಿಸಿದ್ದು, ಬಾಲಿವುಡ್ನ ನಿರ್ಮಾಪಕರು ಮಾಲ್ಡಿವ್ಸ್ನಲ್ಲಿ ತಮ್ಮ ಸಿನಿಮಾಗಳ ಚಿತ್ರೀಕರಣ ಮಾಡುವುದನ್ನು ನಿಲ್ಲಿಸಬೇಕು, ಈಗಾಗಲೇ ಚಿತ್ರೀಕರಣ ಮಾಡಲು ಮಾಡಿಕೊಂಡಿರುವ ಬುಕಿಂಗ್ಗಳನ್ನು ರದ್ದು ಮಾಡಬೇಕು ಎಂದು ಕೋರಿದೆ.
ಮಾಲ್ಡೀವ್ಸ್‌ನಲ್ಲಿ ಯಾವುದೇ ಶೂಟಿಂಗ್ ಅಥವಾ ಉತ್ಪಾದನಾ ಚಟುವಟಿಕೆಗಳನ್ನು ಯೋಜಿಸದಂತೆ ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ನಿರ್ಮಾಪಕರಿಗೆ ಈ ಮೂಲಕ ಸೂಚಿಸಲಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ಮತ್ತು ನಮ್ಮ ರಾಷ್ಟ್ರಕ್ಕೆ ಬಲವಾದ ಬೆಂಬಲವನ್ನು ನೀಡುವ ಸಲುವಾಗಿ ಈ ಗಟ್ಟಿ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ ಎಂದು ಪತ್ರದಲ್ಲಿ ಹೇಳಿದೆ.