ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಇನ್ಮುಂದೆ ಶಾಲಾ ಪ್ರವೇಶಕ್ಕೆ ಯಾವುದೇ ರೀತಿಯ ವರ್ಗಾವಣೆ ಪ್ರಮಾಣ ಪತ್ರಗಳ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಿದೆ.
ಜೊತೆಗೆ ಹೊಸ ವಿದ್ಯಾರ್ಥಿಗಳ ಸೇರ್ಪಡೆಗೆ ವರ್ಗಾವಣೆ ಪ್ರಮಾಣ ಪತ್ರ ತರಲು ಒತ್ತಾಯಿಸದಂತೆ ಸೂಚಿಸಿದೆ.
ತಮಿಳುನಾಡಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಹಿಂದಿನ ಶಿಕ್ಷಣ ಸಂಸ್ಥೆಗಳಿಂದ ವರ್ಗಾವಣೆ ಪ್ರಮಾಣಪತ್ರಗಳನ್ನು ತಯಾರಿಸಲು ಒತ್ತಾಯಿಸದಂತೆ ಸೂಚನೆ ನೀಡಿ ರಾಜ್ಯಾದ್ಯಂತ ಶಾಲಾ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಹೊರಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಹೈಕೋರ್ಟ್ ಬಾರ್ ಮತ್ತು ಬೆಂಚ್ ವರದಿ ಮಾಡಿದಂತೆ,ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣ್ಯಂ ಮತ್ತು ಸಿ. ಕುಮಾರಪ್ಪನ್ ಅವರ ಪೀಠವು ವರ್ಗಾವಣೆ ಪ್ರಮಾಣ ಪತ್ರಗಳಲ್ಲಿ ಶಾಲಾ ಶುಲ್ಕವನ್ನು ಪಾವತಿಸದಿರುವ ಅಥವಾ ವಿಳಂಬವಾದ ಪಾವತಿಗೆ ಸಂಬಂಧಿಸಿದ ಅನಗತ್ಯ ನಮೂದುಗಳನ್ನು ಶಾಲೆಗಳು ಮಾಡುವುದಕ್ಕೆ ನ್ಯಾಯಾಲಯವು ನಿಷೇಧ ವಿಧಿಸಿದೆ. ಶಾಲೆಗಳು ವಿದ್ಯಾರ್ಥಿಯ ಟಿಸಿಯನ್ನು ಶುಲ್ಕದ ಬಾಕಿ ವಸೂಲಿ ಮಾಡುವ ಸಾಧನವಾಗಿ ದುರ್ಬಳಕೆ ಮಾಡಬಾರದು ಎಂದು ಎಚ್ಚರಿಸಿದೆ.
ನ್ಯಾಯಾಲಯದ ನಿರ್ದೇಶನಗಳು ಟಿಸಿಯಲ್ಲಿ ಬಾಕಿ ಇರುವ ಅಥವಾ ಶುಲ್ಕವನ್ನು ಪಾವತಿಸದಿರುವ ನಮೂದುಗಳನ್ನು ಮಾಡುವುದನ್ನು ಇದು ತಡೆಯುತ್ತದೆ. ಯಾಕೆಂದರೆ ಇದು ಶಿಕ್ಷಣ ಹಕ್ಕು (RTE) ಕಾಯಿದೆಯ ಉಲ್ಲಂಘನೆಯಾಗಿದೆ ಮತ್ತು ಮಾನಸಿಕ ಕಿರುಕುಳವನ್ನು ಉಂಟು ಮಾಡುತ್ತದೆ ಎಂದು ಆರ್ಟಿಇ ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.