ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಋತ್ ಪ್ರಭು ಅಭಿನಯದ ಇತ್ತೀಚಿನ ಚಿತ್ರ ‘ಮಾ ಇಂಟಿ ಬಂಗಾರಂ’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಕೇವಲ ಒಂದು ವಾರದಲ್ಲೇ ಈ ಸಿನಿಮಾ 50 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ಬರೆದಿದೆ. ಇತ್ತೀಚಿನ ದಿನಗಳಲ್ಲಿ ತಮಗೆ ಅವಕಾಶಗಳು ಕಡಿಮೆಯಾಗಿವೆ ಎಂದು ಸಮಂತಾ ಅವರೇ ಹೇಳಿಕೊಂಡಿದ್ದರು. ಆದರೆ, ಈ ಚಿತ್ರದ ಯಶಸ್ಸು ಅವರ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ವಿಶೇಷವಾಗಿ ಮಹಿಳೆಯರು ಹಾಗೂ ಕುಟುಂಬ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುತ್ತಿದ್ದಾರೆ.
ನಿರ್ಮಾಪಕರಿಲ್ಲದೆ ಸ್ವಂತ ದುಡ್ಡಿನಲ್ಲಿ ತಯಾರಾದ ಚಿತ್ರ!
ಈ ಚಿತ್ರದ ಯಶಸ್ಸಿನ ಹಿಂದೆ ದೊಡ್ಡ ಕಥೆಯೊಂದಿದೆ. ಈ ಸಿನಿಮಾಗೆ ಹಣ ಹೂಡಲು ಯಾವುದೇ ದೊಡ್ಡ ನಿರ್ಮಾಪಕರು ಮುಂದೆ ಬಂದಿರಲಿಲ್ಲವಂತೆ. ಈ ಕುರಿತು ಚಿತ್ರದ ಸಹ-ಚಿತ್ರಕಥೆಗಾರ ಹಾಗೂ ನಿರ್ಮಾಪಕ ರಾಜ್ ನಿಧಿಮೋರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. “ಯಾರೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದ ಕಾರಣ, ಕೆಲ ನಿರ್ಮಾಪಕರು ಚಿತ್ರದಿಂದ ಹಿಂದೆ ಸರಿದಿದ್ದರು. ಹೀಗಾಗಿ ನಾವೇ ಸ್ವಂತ ಹಣ ಹೂಡಿ, ಅತ್ಯಂತ ಮಿತವ್ಯಯದಲ್ಲಿ (Low Budget) ಈ ಚಿತ್ರವನ್ನು ನಿರ್ಮಿಸಿದೆವು,” ಎಂದು ಅವರು ತಿಳಿಸಿದ್ದಾರೆ.
ದೊಡ್ಡ ಬಜೆಟ್ ಎಂದರೆ ಭಯ!
ತಮ್ಮ ವೃತ್ತಿಜೀವನದಲ್ಲಿ ಇಂತಹ ಸವಾಲುಗಳನ್ನು ಎದುರಿಸಿಯೇ ಒಗ್ಗಿಕೊಂಡಿರುವುದಾಗಿ ಹೇಳಿದ ರಾಜ್, ದೊಡ್ಡ ಬಜೆಟ್ ಚಿತ್ರಗಳು ತಮಗೆ ಭಯ ಹುಟ್ಟಿಸುತ್ತವೆ ಎಂದಿದ್ದಾರೆ. ಸ್ವತಂತ್ರ ನಿರ್ಮಾಪಕನಾಗಿ ಬಜೆಟ್ ನಿಯಂತ್ರಣದಲ್ಲಿಡುವುದನ್ನು ತಾವು ನಂಬುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಲೋ-ಬಜೆಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಲಾಭ ತಂದುಕೊಟ್ಟಿದೆ.



