ಹೊಸ ದಿಗಂತ ವರದಿ, ಶಿವಮೊಗ್ಗ :
ತಾಲ್ಲೂಕಿನ ಹೊರಬೈಲು ಗ್ರಾಮದಲ್ಲಿ ಅಂತರ್‌ಜಾತಿ ವಿವಾಹಕ್ಕೆ ಸಂಬಂದಿಸಿ ಜೋಗಿ ಸಮಾಜ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬುದು ಶುದ್ಧ ಸುಳ್ಳು. ಯಾರಿಗೂ ಅಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ಎಂದು ಜೋಗಿ ಸಮಾಜದ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.
ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳದ ಪ್ರಮುಖರಾದ ಚಂದ್ರಪ್ಪ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹೊರಬೈಲು ಗ್ರಾಮದ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಯುವಕ ಮತ್ತು ಯುವತಿ ಸಂಘಟನೆಯೊಂದರ ಜಿಲ್ಲಾ ಸಂಚಾಲಕನೆಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಂದಿಗೆ ಸೇರಿಕೊಂಡು ದೂರು ನೀಡಿದ್ದಾರೆ. ಇದು ಶುದ್ಧ ಸುಳ್ಳು ಎಂದರು.
ಗ್ರಾಮದಲ್ಲಿ ಸುಮಾರು 50 ಸಮುದಾಯದ ಕುಟುಂಬಗಳಿವೆ. ಈಗಾಗಲೇ ಹಲವು ಅಂತರ್ಜಾತಿ ವಿವಾಹಗಳು ಆಗಿವೆ. ಎಲ್ಲರೂ ಸುಖವಾಗಿದ್ದಾರೆ. ನಮ್ಮ ಸಮುದಾಯದ ಯುವಕ, ರಾಮನಗರದ ಇನ್ನೊಂದು ಜಾತಿಗೆ ಸೇರಿದ ಯುವತಿಯನ್ನು ಈಗಾಗಲೇ ಮದುವೆಯಾಗಿದ್ದಾನೆ. ಅವರಿಬ್ಬರು ನಮ್ಮ ಗ್ರಾಮದಲ್ಲಿಯೇ ವಾಸವಾಗಿದ್ದಾರೆ. ನವ ವಧು ವರರನ್ನು ನಮ್ಮ ಸಮುದಾಯದ ಮುಖಂಡರೇ ಮುಂದೆ ನಿಂತು ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ದಂಪತಿ ಅನ್ಯೋನ್ಯವಾಗಿದ್ದಾರೆ. ಕೆಲವರ ಚಿತಾವಣೆಯಿಂದ ಈ ರೀತಿಯ ಅಪಪ್ರಚಾರ ನಡೆದಿದೆ ಎಂದರು.
ಗ್ರಾಮದ ಕೆಲವರು ಸೇರಿಕೊಂಡು ಜಿಲ್ಲಾ ಸಂಚಾಲಕನ ಕುಮ್ಮಕ್ಕಿನಿಂದ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಯುವಕನ ಪತ್ನಿ ಕಡೆಯಿಂದ ಕುಂಸಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಜಿಲ್ಲಾ ಸಂಚಾಲಕ ಹೊರಬೈಲು ಗ್ರಾಮಕ್ಕೆ ಬಂದೂ ಇಲ್ಲ. ಯಾವುದೋ ದ್ವೇಷಕ್ಕೆ ಜೋಗಿ ಸಮುದಾಯದ ಮುಖಂಡರ ಮೇಲೆ ಆರೋಪ ಮಾಡಿದ್ದಾನೆ ಎಂದರು.
ಸುಳ್ಳು ದೂರು ಕೊಡಲು ಕುಮ್ಮಕ್ಕು ನೀಡಿದ ಜಿಲ್ಲಾ ಸಂಚಾಲಕ ಮತ್ತು ಅವರ ಬೆಂಬಲಿಗರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಜೋಗಿ ಸಮಾಜದ ಮುಖಂಡರಾದ ಶಿವಕುಮಾರ ಜೋಗಿ, ಬಂಗಾರಪ್ಪ, ರಾಜು, ಸುರೇಖಾ ಹಾಗೂ ಶಶಿಕಲಾ ಇದ್ದರು.