ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳುನಾಡು ಸಚಿವಉದಯನಿಧಿ ಸ್ಟ್ಯಾಲಿನ್ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ತೆಲುಗು ನಿರೂಪಕಿ, ನಟಿ ರಶ್ಮಿ ಗೌತಮ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ರಶ್ಮಿ ಗೌತಮ್, ನಟ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್‌ನ ಹಳೆಯ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ, ಅದರಲ್ಲಿ ಅವರು ಹಿಂದು ಧರ್ಮದ ಮೇಲೆ ನಂಬಿಕೆ ಇಲ್ಲದ ವ್ಯಕ್ತಿಗಳಿಂದ ಸನಾತನ ಧರ್ಮವನ್ನು ನಾವೆಲ್ಲರೂ ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದ್ದರು.ಆ ಬಳಿಕ ರಶ್ಮಿ ಗೌತಮ್ ವಿರುದ್ಧ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ.
ಆ ಬಳಿಕ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ರಶ್ಮಿ ಗೌತಮ್, ಸನಾತನ ಧರ್ಮದಲ್ಲಿ ನಂಬಿಕೆಯಿಟ್ಟಿದ್ದಕ್ಕಾಗಿ ತನ್ನನ್ನು ಟೀಕಿಸುತ್ತಿರುವ ಎಲ್ಲ ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರೂ ಕೂಡ ನನ್ನ ದೇವರು ಹಾಗೂ ನನ್ನ ನಂಬಿಕೆಯನ್ನು ನಿಂದಿಸುವ ಅಗತ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ನಾಸ್ತಿಕರಾಗಿರುವುದಕ್ಕೆ ನಾನು ನಿಮ್ಮನ್ನು ಎಂದೂ ಪ್ರಶ್ನೆ ಮಾಡಿಲ್ಲ. ಆಸ್ತಿಕರಾಗಿರುವ ಕಾರಣಕ್ಕೆ ನೀವು ಯಾಕೆ ನನ್ನನ್ನು ಪ್ರಶ್ನೆ ಮಾಡಬೇಕು ಎನ್ನುವ ಅರ್ಥದಲ್ಲಿ ರಶ್ಮಿ ಗೌತಮ್ ಪೋಸ್ಟ್ ಮಾಡಿದ್ದಾರೆ.
ಪ್ರತಿಯೊಂದು ಧರ್ಮದಲ್ಲೂ ಉಗ್ರಗಾಮಿಗಳು ಮತ್ತು ಮೂಲಭೂತವಾದಿಗಳು ಇದ್ದಾರೆ. ಆದ ಮಾತ್ರಕ್ಕೆ ನಾವು ನಮ್ಮ ಧರ್ಮವನ್ನು ಬದಲಾಯಿಸಬೇಕು ಎಂದು ಅರ್ಥವಲ್ಲ ಎಂದು ರಶ್ಮಿ ಗೌತಮ್ ಹೇಳಿದ್ದಾರೆ.
ಅದೇ ರೀತಿ ಪ್ರತಿ ಧರ್ಮದ ತತ್ವವು ಬದುಕುವುದು ಮತ್ತು ಬದುಕಲು ಬಿಡುವುದು ಎಂದು. ನನ್ನ ದೇವರು ಮತ್ತು ನನ್ನ ನಂಬಿಕೆಯನ್ನು ಎಂದಿಗೂ ನಿಂದಿಸಬೇಡಿ ಎಂದು ರಶ್ಮಿ ಗೌತಮ್ ಎಚ್ಚರಿಸಿದ್ದಾರೆ.
ಹಿಂದುತ್ವವಾದಿಯಾಗಿದ್ದರೆ ಮತ್ತು ಹಿಂದು ಧರ್ಮದ ನಿಜವಾದ ಸಿದ್ಧಾಂತವನ್ನು ಬೆಂಬಲಿಸುವುದನ್ನೇ ನೀವು ಸಂಘಿ ಎಂದು ಕರೆದರೆ, ನಾನು ಹೆಮ್ಮೆಯಿಂದ ಸಂಘಿ ಎಂದುಕೊಳ್ಳುತ್ತೇನೆ ಹೇಳಿದ್ದಾರೆ.
ಈ ವೇಳೆ ಹಿಂದು ಅನ್ನೋದು ವಿದೇಶಿ ಪದ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದು ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಶ್ಮಿ, ‘ನೀವು ಅದಕ್ಕೆ ಬದ್ಧರಾಗಿರಿ. ನನ್ನ ನಂಬಿಕೆಯನ್ನು ಪ್ರಶ್ನೆ ಮಾಡುವ ಸಾಹಸಕ್ಕೆ ಬರಬೇಡಿ. ನಿಮ್ಮ ನಂಬಿಕೆಯನ್ನೂ ನಾನು ಪ್ರಶ್ನೆ ಮಾಡೋದಿಲ್ಲ’ ಎಂದು ಉತ್ತರಿಸಿದ್ದಾರೆ.
ಈ ಮೂಲಕ ನಿರಂತರವಾಗಿ ರಶ್ಮಿ ಗೌತಮ್ ಅವರು ಹಿಂದು ಧರ್ಮ ಮತ್ತು ಸನಾತನ ಧರ್ಮಕ್ಕೆ ತಮ್ಮ ಬೆಂಬಲದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.