ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಅಧಿಕಾರಿಗಳ ತಪ್ಪಿನಿಂದಾಗಿ ಹೀಗಾಗಿದೆ. ಈ ಹಗರಣದಲ್ಲಿ ನಮ್ಮ ಶಾಸಕರ ಪಾತ್ರ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ವಾಲ್ಮೀಕಿ ಹಾಗೂ ಮೂಡಾ ಹಗರಣ ವಿಚಾರ ಪ್ರತಿಧ್ವನಿಸಿತು.
ಈ ವೇಳೆ ಡಿಸಿಎಂ ಡಿಕೆಶಿ ಮಾತನಾಡಿ, ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಗಳ ತಪ್ಪಿನಿಂದಾಗಿ ಹೀಗಾಗಿದೆ. ಈ ಹಗರಣದಲ್ಲಿ ನಮ್ಮ ಶಾಸಕರ ಪಾತ್ರ ಇಲ್ಲ. ನನ್ನ ಬಳಿ ಆಣೆ ಪ್ರಮಾಣ ಮಾಡಿ ಹೇಳಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಸುಮ್ಮನೆ ಬಿಡೋದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ. ಹಗರಣ ಆಗಿದೆ ಅಂತ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಚೇರಿಗಳಿರಬೇಕು. ಸ್ವಂತ ಕಟ್ಟಡಗಳಿರುವಂತೆ ನೋಡಿಕೊಳ್ಳಬೇಕು. ಅದಕ್ಕೆ ಬೇಕಾದ ನೆರವು ಪಕ್ಷವೇ ಭರಿಸಲಿದೆ. ಬ್ಲಾಕ್ ಮಟ್ಟದಲ್ಲೂ ಕಚೇರಿಗಳಿರಬೇಕು. ಬಾಡಿಗೆ ಕಟ್ಟಡಗಳಲ್ಲಾದ್ರೂ ಕಚೇರಿ ಮಾಡಬೇಕು. ಬಗರ್ ಹುಕುಂ ಸಮಿತಿಗಳಲ್ಲಿ ಕಾರ್ತಕರ್ತರಿಗೆ ಅವಕಾಶ ನೀಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.