ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ 62 ಲಕ್ಷ ವಾಹನಗಳಿಗೆ ನೋ ಪೆಟ್ರೋಲ್, ಡೀಸೆಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 62 ಲಕ್ಷ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಸಿಗುವುದಿಲ್ಲ.

ಹೌದು .. ವಾಯುಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನವಾಗಿ ಈಗ ದೆಹಲಿ ಸರ್ಕಾರ 15 ವರ್ಷಕ್ಕಿಂತಲೂ ಹಳೆಯ ಪೆಟ್ರೋಲ್‌ ಅವಲಂಬಿತ ವಾಹನಗಳು ಹಾಗೂ 10 ವರ್ಷ ಹಳೆಯ ಡೀಸೆಲ್ ಅವಲಂಬಿತ ವಾಹನಗಳಿಗೆ ಇಂಧನ ನೀಡುವುದನ್ನು ನಿಷೇಧಿಸಲಾಗಿದೆ. ಇದರಿಂದ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಸಿಗಲ್ಲ.

ಪ್ರತಿ ಬಾರಿಯೂ ಚಳಿ ಹಾಗೂ ಬೇಸಿಗೆಯ ಸಮಯದಲ್ಲಿ ದೆಹಲಿ ತೀವ್ರವಾದ ವಾಯುಮಾಲಿನ್ಯದಿಂದ ಸಂಕಷ್ಟಕ್ಕೀಡಾಗುತ್ತದೆ. ಆದರೆ ಇಲ್ಲಿನ ವಾಯುಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆಯನ್ನು ಈ ಹಳೆಯ ವಾಹನಗಳೇ ನೀಡುತ್ತಿವೆ. ಅಂದರೆ ಈ ಹಳೇ ವಾಹನಗಳು ದೆಹಲಿ ವಾಯುಮಾಲಿನ್ಯಕ್ಕೆ ಶೇಕಡಾ 51 ರಷ್ಟು ಕೊಡುಗೆ ನೀಡುತ್ತಿವೆ ಎಂದು 2024ರ ನವೆಂಬರ್‌ನಲ್ಲಿ ಬಿಡುಗಡೆಯಾದ ವರದಿ ಹೇಳಿದೆ.

ಹೀಗಾಗಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಎನ್‌ಸಿಆರ್‌ನಾದ್ಯಂತ ಎಲ್ಲಾ ರೀತಿಯ (ಸರಕು ವಾಹಕ, ವಾಣಿಜ್ಯ, ವಿಂಟೇಜ್, ದ್ವಿಚಕ್ರ ವಾಹನಗಳು) ಜೀವಿತಾವಧಿ ಮುಗಿದ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಶಾಸನಬದ್ಧ ನಿರ್ದೇಶನ ಸಂಖ್ಯೆ 89 ಅನ್ನು ಜಾರಿಗೆ ತಂದಿದೆ. ಈ ಕ್ರಮದಿಂದ ದೆಹಲಿಯೊಂದರಲ್ಲೇ ಸುಮಾರು 62 ಲಕ್ಷ ವಾಹನಗಳ (61,14,728) ನಿಷೇಧವಾಗಲಿದೆ.

ಮಾರ್ಚ್ 2025 ರ ವರದಿಯಂತೆ ಹೊತ್ತಿಗೆ ಹರಿಯಾಣದಲ್ಲಿ 27.5 ಲಕ್ಷ ಹಳೆಯ ವಾಹನಗಳು, ಉತ್ತರ ಪ್ರದೇಶದಲ್ಲಿ 12.69 ಲಕ್ಷ ಮತ್ತು ರಾಜಸ್ಥಾನದಲ್ಲಿ 6.2 ಲಕ್ಷ ಹಳೆಯ ವಾಹನಗಳಿವೆ.

ಹಳೆಯ ವಾಹನಗಳು ಯಾವ ಪೆಟ್ರೋಲ್‌ ಪಂಪ್‌ಗೆ ಹೆಚ್ಚು ಬರುವುದೋ ಅಲ್ಲಿ ದೆಹಲಿ ಪೊಲೀಸರು, ಸಂಚಾರ ಪೊಲೀಸರು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ನಿಯೋಜಿಸಲು ಸಾರಿಗೆ ಇಲಾಖೆ ಮುಂದಾಗಿದೆ.

1 ರಿಂದ 100 ಸಂಖ್ಯೆಯ ಇಂಧನ ಕೇಂದ್ರಗಳಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು, ಆದರೆ ಸಾರಿಗೆ ಇಲಾಖೆಯು 101 ರಿಂದ 159 ಸಂಖ್ಯೆಯ ಇಂಧನ ಕೇಂದ್ರಗಳಲ್ಲಿ 59 ವಿಶೇಷ ತಂಡಗಳನ್ನು ನಿಯೋಜಿಸಲಿದೆ.

ಗುರುತಿಸಲಾದ 350 ಪೆಟ್ರೋಲ್ ಪಂಪ್‌ಗಳಲ್ಲಿ ಹಳೆಯ ವಾಹನಗಳಿಗೆ ಇಂಧನ ತುಂಬಿಸುವುದನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಒಬ್ಬ ಸಂಚಾರ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಿದೆ.ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿ ಪೆಟ್ರೋಲ್ ಪಂಪ್‌ನಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಿದೆ.

ಜೀವಿತಾವಧಿ ಮುಗಿದ ವಾಹನಗಳನ್ನು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳಿಂದ (ANPR) ಗುರುತಿಸಲಾಗುತ್ತದೆ, ಇವುಗಳನ್ನು 498 ಇಂಧನ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ವಾಹನ್ ಡೇಟಾಬೇಸ್‌ನೊಂದಿಗೆ ಸಂಯೋಜಿಸಲಾದ ಕ್ಯಾಮೆರಾಗಳು, ನಂಬರ್ ಪ್ಲೇಟ್‌ಗಳನ್ನು ಅಡ್ಡ ಪರಿಶೀಲಿಸುತ್ತವೆ ಮತ್ತು ಇಂಧನ ಕೇಂದ್ರ ನಿರ್ವಾಹಕರಿಗೆ ಎಚ್ಚರಿಕೆ ನೀಡುತ್ತವೆ. ಹಳೆಯ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಸ್ಕ್ರ್ಯಾಪ್ ಮಾಡಲು ಈ ವಾಹನದ ವಿವರವನ್ನು ಜಾರಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಈ ಬಗ್ಗೆ ದೆಹಲಿಯ ಪೆಟ್ರೋಲ್ ಡೀಲರ್ ನಿಶ್ಚಲ್ ಸಿಂಘಾನಿಯಾ ಪ್ರತಿಕ್ರಿಯಿಸಿದ್ದು, ಇಂತಹ ದೊಡ್ಡ ಯೋಜನೆಯನ್ನು ಜಾರಿಗೆ ತರುವ ಮೊದಲು ಪ್ರಾಯೋಗಿಕ ಪರೀಕ್ಷೆ ನಡೆಸಬೇಕಿತ್ತು ಎಂದು ಹೇಳಿದ್ದಾರೆ. ಜಾರಿ ತಂಡ ಎಷ್ಟು ಕಾಲ ಇರುತ್ತದೆ? 30 ದಿನಗಳು, 60 ದಿನಗಳು, 90 ದಿನಗಳು? ಅದರ ನಂತರ ನಾವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ? ದಂಡ ವಿಧಿಸಲಾಗುವುದರಿಂದ ವಾಹನ ಕಾಣೆಯಾಗುವ ಭಯವೂ ಇದೆ. ಈ ಯೋಜನೆಯನ್ನು ಎನ್‌ಸಿಆರ್‌ನಾದ್ಯಂತ ಏಕಕಾಲದಲ್ಲಿ ಜಾರಿಗೆ ತರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!