ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಬಿಜೆಪಿ ಜೊತೆಗೆ ಎನ್‌ಸಿಪಿ ಕೈಜೋಡಿಸುವುದಿಲ್ಲ ಎಂಬುದು ಸ್ಪಷ್ಟ. ಇದಕ್ಕೆ ವಿರುದ್ಧವಾದ ಯಾವುದೇ ಸಲಹೆಗೂ ನಮ್ಮ ಸಹಮತ ಇಲ್ಲ ಎಂದರು.
ಎನ್ ಸಿಪಿ ವಿರುದ್ಧ ಬಂಡಾಯ ಎದ್ದು ಬಿಜೆಪಿ ಜೊತೆ ಕೈಜೋಡಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿನ್ನೆ ಶರದ್ ಪವಾರ್ ನೇತೃತ್ವದ ಗುಂಪು ಪ್ಯಾಚ್-ಅಪ್ ಗಾಗಿ ತನ್ನನ್ನು ಸಂಪರ್ಕಿಸುತ್ತಿದೆ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಪುಣೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, “ನಾವು ತೆಗೆದುಕೊಂಡ ನಿಲುವಿಗೆ ವಿರುದ್ಧವಾಗಿ, ಬಿಜೆಪಿಯನ್ನು ಬೆಂಬಲಿಸಬೇಕೆಂದು ಯಾರಾದರೂ ಸೂಚಿಸಿದರೆ, ನಾನು ಸೇರಿದಂತೆ ಪಕ್ಷದ ಅನೇಕರು ಅದನ್ನು ಒಪ್ಪುವುದಿಲ್ಲ. ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂಬ ನಮ್ಮ ನಿಲುವು ತುಂಬಾ ಸ್ಪಷ್ಟ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಿನ ಜಾವ ಪ್ರಮಾಣ ವಚನ ಸ್ವೀಕರಿಸಿದ್ದ ಯಾರಾದರೂ ಬಿಜೆಪಿ ಬೆಂಬಲಿಸುವುದು ಪಕ್ಷದ ನೀತಿ ಎಂದು ಹೇಳಿರಬಹುದು. ಆದರೆ ಆ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಪರೋಕ್ಷವಾಗಿ ಅಜಿತ್ ಪವಾರ್ ಗೆ ಟಾಂಗ್ ನೀಡಿದ್ದಾರೆ.