ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ದೇಶಾದ್ಯಂತ ‘ನೋ ಯುಪಿಐ ಡೇ’ ಆಚರಿಸಲಾಗುವುದು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಹಿಷ್ಕರಿಸಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವಂತದ್ದು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಎಳೆದಿರುವ ಸಿಎಐಟಿ, ಅಕ್ಟೋಬರ್ 2 ರಂದು ಡಿಜಿಟಲ್ ಪಾವತಿ ಬಹಿಷ್ಕರಿಸುವ ಕುರಿತು ಯಾವುದೇ ರೀತಿಯ ನಿರ್ಣಯವನ್ನು ಕೈಗೊಂಡಿಲ್ಲ. ಈ ಸಂಬಂಧ ಯಾವುದೇ ಅಧಿಕೃತ ಸಭೆ ಅಥವಾ ಪ್ರಕಟಣೆಯನ್ನು ಸಂಸ್ಥೆ ಹೊರಡಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಯುಪಿಐ ತಂದಿರುವ ಡಿಜಿಟಲ್ ಪಾವತಿ ಕ್ರಾಂತಿಯನ್ನು ಸಿಎಐಟಿ ಸಂಸ್ಥೆಯು ಸದಾ ಮುಕ್ತವಾಗಿ ಸ್ವಾಗತಿಸುತ್ತಾ ಬಂದಿದೆ. ಈ ಕುರಿತು ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು, “ದೇಶದ ಲಕ್ಷಾಂತರ ಸಣ್ಣ ಮತ್ತು ದೊಡ್ಡ ವರ್ತಕರಿಗೆ ಹಾಗೂ ಗ್ರಾಹಕರಿಗೆ ಯುಪಿಐ ಅತ್ಯಂತ ಸರಳ, ಸುರಕ್ಷಿತ ಮತ್ತು ಪಾರದರ್ಶಕ ವ್ಯವಸ್ಥೆಯಾಗಿದೆ. ನಾವು ಡಿಜಿಟಲ್ ಭಾರತದ ಆಶಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ತಿಳಿಸಿದ್ದಾರೆ.
ಅಕ್ಟೋಬರ್ 15 ರಿಂದ ಜಾರಿಗೆ ಬರಬಹುದು ಎನ್ನಲಾದ ನಿಯಮದಂತೆ, 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವ್ಯಾಪಾರಿ ಯುಪಿಐ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ವಿಧಿಸುವ ಸರ್ಕಾರದ ಪ್ರಸ್ತಾವಿತ ನಿರ್ಧಾರವನ್ನು ಕೆಲವು ಸ್ಥಳೀಯ ಮತ್ತು ಪ್ರಾದೇಶಿಕ ವರ್ತಕರ ಸಂಘಟನೆಗಳು ವಿರೋಧಿಸುತ್ತಿವೆ. ಈ ಕಾರಣದಿಂದಾಗಿ ಕೆಲವು ಸ್ಥಳೀಯ ಸಂಘಟನೆಗಳು ಸ್ವತಂತ್ರವಾಗಿ ನಗದು ಪಾವತಿ ಆಂದೋಲನ ಅಥವಾ ಪ್ರತಿಭಟನೆಗೆ ಕರೆ ನೀಡಿರಬಹುದು. ಆದರೆ, ಅಂತಹ ಸ್ಥಳೀಯ ನಿರ್ಧಾರಗಳಿಗೂ ರಾಷ್ಟ್ರೀಯ ಮಟ್ಟದ ಸಿಎಐಟಿ ಸಂಸ್ಥೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಅಕ್ಟೋಬರ್ 2 ರಂದು ದೇಶಾದ್ಯಂತ ಯುಪಿಐ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ವರ್ತಕರು ಯುಪಿಐ ಬಹಿಷ್ಕರಿಸುತ್ತಿಲ್ಲ. ಸಾರ್ವಜನಿಕರು ಮತ್ತು ಗ್ರಾಹಕರು ಇಂತಹ ಆಧಾರರಹಿತ ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಒಕ್ಕೂಟ ವಿನಂತಿಸಿದೆ.



