January19, 2026
Monday, January 19, 2026
spot_img

ಮಸೀದಿಗಳಲ್ಲಿ ಕೂಗುವ ಆಜಾನ್‌ನಿಂದ ಶಬ್ದಮಾಲಿನ್ಯ: ಆಡಳಿತ-ವಿಪಕ್ಷಗಳ ನಡುವೆ ಗದ್ದಲ ಗಲಾಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಸೀದಿಗಳಲ್ಲಿ ಕೂಗುವ ಆಜಾನ್‌ನಿಂದ ಶಬ್ದಮಾಲಿನ್ಯ ಆಗ್ತಿದೆ ಎಂಬ ವಿಚಾರ ವಿಧಾನ ಪರಿಷತ್‌ನಲ್ಲಿಂದು ಆಡಳಿತ-ವಿಪಕ್ಷಗಳ ನಡುವೆ ಗದ್ದಲ ಗಲಾಟೆಗೆ ಕಾರಣವಾಗಿದೆ.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಈ ಬಗ್ಗೆ ಪ್ರಶ್ನೆ ಕೇಳಿದ್ರು. ಆಜಾನ್ ಕೂಗುವಾಗ ಶಬ್ದಮಾಲಿನ್ಯ ಆಗ್ತಿದೆ. ನಿಯಮದ ಪ್ರಕಾರ ಬೆಳಗ್ಗೆ 6ರಿಂದ 10ರ ತನಕ ಯಾವುದೇ ಶಬ್ದಮಾಲಿನ್ಯ ಆಗಬಾರದು. ನನ್ನ ಮನೆಯ ಹಿಂದೆಯೇ ಮಸೀದಿ ಇದೆ. 4:45ಕ್ಕೆ ಆಜಾನ್ ಶುರುವಾಗುತ್ತೆ. ನಮ್ಮ ತಂದೆಗೆ 86 ವರ್ಷ ಆ ಆಜಾನ್ ಸೌಂಡ್‌ಗೆ ಎದ್ದು ಕೂರಬೇಕು. ಸುತ್ತಮುತ್ತಲಿನ ಮನೆಯವರಿಗೂ ಸಮಸ್ಯೆ ಆಗಿದೆ. ಗಣೇಶೋತ್ಸವ ಸಮಯದಲ್ಲಿ ಡಿಜೆ ಹಾಕಬಾರದು ಅಂತ ಹಬ್ಬದ ಸಮಯದಲ್ಲಿ ಆರ್ಡರ್ ಮಾಡ್ತೀರಾ ಮತ್ತು ಡಿಜೆ ಜಪ್ತಿ ಮಾಡ್ತೀರಾ. ಮಸೀದಿಗೆ ಹೋಗಿ ವಿನಂತಿ ಮಾಡಿದರೂ ಬಂದ್ ಮಾಡಲ್ಲ. ಪೊಲೀಸರೇ ರಿಕ್ವೆಸ್ಟ್ ಮಾಡ್ತಾರೆ. ಇವರಿಗೆ ಆಜಾನ್ ಶಬ್ದಮಾಲಿನ್ಯ ನಿಲ್ಲಿಸೋ ಧಮ್ ಇಲ್ಲ. ಸರ್ಕಾರ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರ ನೀಡಿ, ಶಬ್ದಮಾಲಿನ್ಯ ಎಲ್ಲಾ ಕಡೆ ಇದೆ. ಸುಪ್ರಿಂಕೋರ್ಟ್ ತೀರ್ಪಿನಂತೆ ವಸತಿ ಪ್ರದೇಶಗಳಲ್ಲಿ 50 ಡೆಸಿಬಲ್‌ಗಿಂತ ಹೆಚ್ಚಿರಬಾರದು ಅಂತ ಇದೆ. ಸರ್ಕಾರವೇ ಕಾನೂನು ಮಾಡಿದೆ. ಸಮಿತಿ ರಚನೆ ಮಾಡಿ ಡಿವೈಎಸ್ಪಿ, ಎಸಿಪಿ ಅಧ್ಯಕ್ಷತೆಯಲ್ಲಿ ಅನುಷ್ಟಾನಕ್ಕೆ ಜವಾಬ್ದಾರಿ ನೀಡಲಾಗಿದೆ. ದೂರು ಬಂದ ಸಂದರ್ಭದಲ್ಲಿ ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಪರಿಸರ ಅಧಿಕಾರಿ ತಪಾಸಣೆ ಮಾಡಿ, ನಿಯಮಾನುಸಾರ ಎಷ್ಟು ಡೆಸಿಬಲ್ ಇದೆ ಎಂಬುದನ್ನು ಚೆಕ್ ಮಾಡ್ತಾರೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೇವಲ ಆಜಾನ್ ಮಾತ್ರವಲ್ಲ. ಮದುವೆ ಸಮಾರಂಭ, ಎಲ್ಲ ತರಹದ ಧಾರ್ಮಿಕ ಕಾರ್ಯಕ್ರಮಗಳೂ ರಾತ್ರಿ ನಡೆಯುತ್ತವೆ. ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತೇವೆ ಎಂದರು.

ಸಚಿವರ ಉತ್ತರಕ್ಕೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದು ಒಂದು ದಿನದ ಕಥೆಯಲ್ಲ ಪ್ರತಿದಿನ. ಪ್ರತಿದಿನ ಆಜಾನ್ ಶಬ್ದ ಮಾಡ್ತಾರೆ ಅಂತ ಕಿಡಿಕಾರಿದರು. ಡಿಎಸ್ ಅರುಣ್ ಮಾತಾಡಿ, ಯಾರಿಗೂ ದೂರು ನೀಡಲು ಧೈರ್ಯ ಇಲ್ಲ. ಯಾಕೆಂದರೆ ಇವರಿಗೆ ಸರ್ಕಾರದ ರಕ್ಷಣೆ ಇದೆ. ಮಸೀದಿಯಲ್ಲಿ 50 ಡೆಸಿಬಲ್‌ಗಿಂತ ಹತ್ತುಪಟ್ಟು ಹೆಚ್ಚು ಶಬ್ದ ಮಾಡ್ತಾರೆ. ಇವರ ಮೇಲೆ ಕ್ರಮ ತೆಗೆದುಕೊಳ್ಳೋ ಧಮ್ ಇಲ್ಲ ಅಂತ ಕಿಡಿಕಾರಿದರು.

Must Read

error: Content is protected !!