ಸಿಂಧನೂರು ಜಿಲ್ಲಾ ಕೇಂದ್ರವಾಗಲು ಪಕ್ಷಾತೀತ ಹೋರಾಟ: ಶಾಸಕ ಹಂಪನಗೌಡ ಬಾದರ್ಲಿ

ಹೊಸದಿಗಂತ ವರದಿ,ಸಿಂಧನೂರು(ರಾಯಚೂರು)

ಯಾವುದೇ ಜಿಲ್ಲಾ ಕೇಂದ್ರ ಮಾಡಬೇಕೆಂದರೆ ಕೇಂದ್ರ ಮತ್ತು ರಾಜ್ಯದ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಅದಕ್ಕೆ ಬೇಕಾದ ಪೂರಕ ದಾಖಲಾತಿಗಳನ್ನು ಸಂಗ್ರಹಿಸಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ನೂತನ ರಂಗಮAದಿರದಲ್ಲಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸುವ ಸಾರ್ವತ್ರಿಕ ಸಲಹಾಸಭೆಯ ನೇತೃತ್ವ ವಹಿಸಿ ಸಭೆಯಲ್ಲಿ ಮಾತನಾಡಿ, ಒಂದು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕಾದರೆ ಬೌಗೋಳಿಕ ವಿಸ್ತೀರ್ಣ, ಜನಸಂಖ್ಯೆ, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಸ್ಟೇಷನ್, ಹೀಗೆ ಅಗತ್ಯತೆಗೆ ಅನುಗುಣವಾಗಿ ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರಿ ಕಟ್ಟಡಗಳೆಲ್ಲ ಒಂದೇ ಕಡೆ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು, ಡಿಪಿಆರ್‌ನ್ನು ತಯಾರಿಸಬೇಕಾಗುತ್ತದೆ ಎಂದರು.

ಗುಜರಾತ್ ಮಾಡಲ್ ನಂತೆ ರಿಂಗ್ ರೋಡ್ ಮಾಡಲು ತಾಲೂಕಿನ ಸುತ್ತಲೂ ಭೂಮಿ ಬೇಕಾಗುತ್ತದೆ. ಇದು ಸರ್ಕಾರದ ಜವಾಬ್ದಾರಿ ಅಲ್ಲ ನಾವೆಲ್ಲ ರೈತರ ಬಳಿ ಹೋಗಿ ಅವರಿಗೆ ರಿಂಗ್ ರೋಡ್ ಆದರೆ ಏನು ಲಾಭ ಎಂಬುದರ ಬಗ್ಗೆ ತಿಳಿಸಿ ಮನವೊಲಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಯಾವುದೇ ಒಂದು ಗ್ರಾಮ ಪಂಚಾಯತಿಯನ್ನು ತಾಲೂಕಿಗೆ ಸೇರಿಸಬೇಕಾದರೆ ವರ್ಷಾನುಗಟ್ಟಲೆ ಕಳೆಯುತ್ತದೆ. ಆದರೆ ಜಿಲ್ಲಾ ಕೇಂದ್ರ ಮಾಡಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ವಿವಿಧ ಪಕ್ಷಗಳ, ಸಂಘಟನೆಗಳ, ಮುಖಂಡರು ತಾಲೂಕಿನ ಅಕ್ಕ ಪಕ್ಕದ ತಮ್ಮ ತಮ್ಮ ಸಂಘಟನೆಗಳ ಹಾಗೂ ಪಕ್ಷದ ಮುಖಂಡರಗಳನ್ನು ಭೇಟಿಯಾಗಿ ಮನಃ ಪರಿವರ್ತನೆ ಮಾಡಿ, ಜನತೆಯ ವಿಶ್ವಾಸವನ್ನು ಗಳಿಸಬೇಕು ಎಂದು ಎಲ್ಲ ಸಂಘಟನೆಯ ಮುಖಂಡರಿಗೆ ಸಲಹೆ ನೀಡಿದರು.

ಎಲ್ಲ ಸಂಘಟನೆಗಳು ಸೇರಿ ಒಂದು ಸಮಿತಿ ರಚನೆ ಮಾಡಿ, ಮುಂದಾಲೋಚನೆ ಇಟ್ಟುಕೊಂಡು ನೀಲಿನಕ್ಷೆ ತಯಾರಿಸಿ, ಅದಕ್ಕೆ ಬೇಕಾದ ಪೂರಕವಾದ ಮೂಲಭೂತ ಸೌಕರ್ಯ ಒದಗಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಇದೆ ಅವರದೇ ಶಾಸಕರು ಇದ್ದಾರೆ ಮುಖ್ಯಮಂತ್ರಿಗಳು ಅವರ ಪರವಾಗಿದ್ದಾರೆ. ಅಕ್ಕ ಪಕ್ಕದ ಶಾಸಕರು ಕಾಂಗ್ರೆಸ್ಸಿನವರೆ ಇದ್ದಾರೆ. ಸುಲಭವಾಗಿ ಜಿಲ್ಲಾ ಕೇಂದ್ರ ಮಾಡಬಹುದು ಎಂದು ಭಾವಿಸಬೇಡಿ, ಸರ್ಕಾರ ಮತ್ತು ಶಾಸಕರು ನಮ್ಮಂತೆಯೇ ಇರಬಹುದು ಆದರೆ ಅಲ್ಲಿನ ಜನರು ವಿರೋಧ ಮಾಡಿದರೆ, ಯಾವ ಸರ್ಕಾರವು ಏನು ಮಾಡಲಿಕ್ಕೆ ಆಗುವುದಿಲ್ಲ. ಅದಕ್ಕಾಗಿ ಕನ್ನಡಪರ, ದಲಿತಪರ, ಪ್ರಗತಿಪರ, ವೈದ್ಯಕೀಯ ಸಂಘ, ವಕೀಲರ ಸಂಘ, ಶಿಕ್ಷಕರ ಸಂಘ, ರೈತ ಸಂಘ, ಮಹಿಳಾ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳ ಮುಖಂಡರೆಲ್ಲರೂ ಒಂದು ತಿಂಗಳ ಕಾಲ ಇದಕ್ಕಾಗಿಯೇ ಸಮಯ ನಿಗದಿ ಮಾಡಿ, ಸಿಂಧನೂರು ಜಿಲ್ಲಾ ಕೇಂದ್ರವಾದರೆ ಅದರಿಂದಾಗುವ ಸರ್ಕಾರದಿಂದ ಬರುವ ಸೌಲಭ್ಯಗಳು, ಅನುಕೂಲತೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿ, ವಿಶ್ವಾಸ ಗಳಿಸಲು ಪ್ರಯತ್ನ ಮಾಡಿ, ಸರ್ಕಾರದ ಮಟ್ಟದಲ್ಲಿ ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದರು.

ನ್ಯಾಯವಾದಿ ಕೆ.ಭೀಮನಗೌಡ, ಡಾ.ಕೆ.ಶಿವರಾಜ, ಡಾ.ಬಿ.ಎನ್.ಪಾಟೀಲ, ನರೇಧ್ರನಾಥ ರೈ ದೇರ್ಲ, ಹುಸೇನ್ ಸಾಬ್, ಪಂಪಯ್ಯಸ್ವಾಮಿ ಸಾಲಿಮಠ, ಚಂದ್ರಶೇಖರ ತಾವರಗೇರಾ, ವೈಜನಾಥ ಸಗರಮಠ, ಶಿವರಾಜ ಪಾಟೀಲ, ಮರಿಯಪ್ಪ ಬಿಎಸ್ಪಿ, ಅಮರೇಗೌಡ ಮಲ್ಲಾಪುರ, ರಾಮಕೃಷ್ಣ ಭಜಂತ್ರಿ, ಮೌನೇಶ ದೊರೆ, ರವಿಗೌಡ ಮಲ್ಲದಗುಡ್ಡ, ದೇವೇಂದ್ರಗೌಡ, ವೀರೇಶಗೌಡ ನಟೇಕಲ್, ಅವಿನಾಶ್ ದೇಶಪಾಂಡೆ, ಬೀರಪ್ಪ ಶಂಭೋಜಿ, ಪ್ರಲ್ಹಾದ ಗುಡಿ, ವೀರಭದ್ರಪ್ಪ, ಸಿಂಧನೂರು ಜಿಲ್ಲಾ ಕೇಂದ್ರವಾಗಲು ಸಲಹೆ ಸೂಚನೆ ನೀಡಿ, ಒಗ್ಗಟ್ಟಾಗಿ ಹೋರಾಟಕ್ಕೆ ಸಿದ್ದರಿದ್ದೇವೆ ಎಂದು ಬೆಂಬಲಿಸಿದರು.

ಈ ಸಂದರ್ಭದಲ್ಲಿ: ಖಾಜಿ ಮಲ್ಲಿಕ್, ತಿಮ್ಮಯ್ಯ ನಾಯಕ, ಜಾಫರ್ ಜಾಗೀರದಾರ್, ನಾಗವೇಣಿ ಪಾಟೀಲ, ಶ್ರೀದೇವಿ ಶ್ರೀನಿವಾಸ, ಬಸವರಾಜ ಹಿರೇಗೌಡ, ಆರ್.ಸಿ.ಪಾಟೀಲ, ಅನಿಲ್ ಕುಮಾರ್ ವೈ, ಅಶೋಕ ಉಮಲೂಟಿ, ಗಂಗಣ್ಣ ಡಿಶ್, ದಾವಲಸಾಬ್ ದೊಡ್ಮನಿ, ಸೇರಿದಂತೆ ನೂರಾರು ವಿವಿಧ ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!