ಮುಂಗಾರು ಅಬ್ಬರಕ್ಕೆ ನಲುಗಿದ ಉತ್ತರ ಭಾರತ: 15 ಮಂದಿ ಸಾವು, ಅಪಾರ ಪ್ರಮಾಣದ ಹಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಕೆಲವು ದಿನಗಳಿಂದ ಉತ್ತರ ಭಾರತದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರ ಪರಿಣಾಮ ಅಲ್ಲಲ್ಲಿ ಭೂಕುಸಿತ, ಅಪಾರ ಪ್ರಮಾಣದ ಹಾನಿಗಳಾಗಿವೆ. ಇದರ ಜೊತೆಗೆ 15 ಜನರು ಸಾವನ್ನಪ್ಪಿದ್ದಾರೆ.

ದೆಹಲಿಯ ನಗರ ಮತ್ತು ಪಟ್ಟಣ ಪ್ರದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಅನೇಕ ರಸ್ತೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ. ಪ್ರಮಳೆಯಿಂದಾಗಿ ರೈಲು ಸೇವೆಗೂ ಅಡ್ಡಿಯಾಗಿದ್ದು, ಸುಮಾರು 17 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 12 ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಿಗೆ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ದೆಹಲಿಯಲ್ಲಿ 1982 ರ ನಂತರ ಇದೇ ತಿಂಗಳಲ್ಲಿ ಅತ್ಯಂತ ಹೆಚ್ಚಿನ ಮಳೆ ದಾಖಲಾಗಿದ್ದು, ಅಧಿಕಾರಿಗಳು ಯಮುನಾ ನದಿಯ ನೀರಿನ ಮಟ್ಟ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 153 ಮಿಮೀ ಮಳೆ ಬಿದ್ದರೆ, ಚಂಡೀಗಢ ಮತ್ತು ಹರಿಯಾಣದ ಅಂಬಾಲಾದಲ್ಲಿ ಕ್ರಮವಾಗಿ 322.2 ಮಿಮೀ ಮತ್ತು 224.1 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಏಳು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಶಿಮ್ಲಾ ಜಿಲ್ಲೆಯ ಕೋಟ್ಗಢ ಪ್ರದೇಶದಲ್ಲಿ ಭೂಕುಸಿತದಿಂದ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರೆ, ಕುಲು ಮತ್ತು ಚಂಬಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶದ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕಳೆದ 36 ಗಂಟೆಗಳಲ್ಲಿ ಹದಿನಾಲ್ಕು ಪ್ರಮುಖ ಭೂಕುಸಿತಗಳು ಮತ್ತು 13 ಹಠಾತ್ ಪ್ರವಾಹಗಳು ವರದಿಯಾಗಿದ್ದು, 700 ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಉತ್ತರಾಖಂಡದಲ್ಲಿ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಗುಲಾರ್ ಬಳಿ ಭೂಕುಸಿತದ ನಡುವೆ ಜೀಪ್ ನದಿಗೆ ಬಿದ್ದ ನಂತರ ಮೂವರು ಯಾತ್ರಿಕರು ಗಂಗಾ ನೀರಿನಲ್ಲಿ ಮುಳುಗಿದ್ದಾರೆ.ಜೀಪಿನಲ್ಲಿ 11 ಮಂದಿ ಇದ್ದರು ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐವರನ್ನು ರಕ್ಷಿಸಲಾಗಿದ್ದು, ಮೂವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಮೂರು ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಕಾಶಿಪುರ ಪ್ರದೇಶದಲ್ಲಿ ಎರಡು ಮನೆಗಳು ಕುಸಿದು ದಂಪತಿ ಸಾವನ್ನಪ್ಪಿದ್ದು, ಮೊಮ್ಮಗಳು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೋಡಾ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್ಗೆ ಭೂಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!