ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆಗೆ ಯತ್ನಿಸಿದ ಪ್ರಕರಣವು ಜಗತ್ತಿನಾದ್ಯಂತ ಸುದ್ದಿಯಾಗಿದೆ. ಟ್ರಂಪ್ ಅವರ ಕಿವಿಗೆ ಗುಂಡು ತಗುಲಿದ್ದು, ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ. ದಾಳಿ ಮಾಡಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬ ಯುವಕನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಇತ್ತ ಇದರ ಮಧ್ಯೆಯೇ ಟ್ರಂಪ್ ಅವರ ಮೇಲೆ ನಡೆದ ದಾಳಿಯೇ ಪಿತೂರಿ, ಇದೊಂದು ಹುಸಿ ದಾಳಿ ಎಂದು ಟ್ರಂಪ್ ವಿರೋಧಿಗಳು ಹೇಳುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ವಿರೋಧಿಗಳು ಗುಂಡಿನ ದಾಳಿಯ ಕುರಿತು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಹುಸಿ ದಾಳಿಯ ನಾಟಕ ಮಾಡಲಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ತಾಗಿರುವುದು ಗುಂಡು ಅಲ್ಲ, ಅದು ಗಾಜಿನ ತುಣುಕು. ಗುಂಡು ತಾಗಿದ ಕಾರಣ ಟೆಲಿಪ್ರಾಂಪ್ಟರ್‌ನ ಒಂದು ಗಾಜಿನ ತುಣುಕು ಹಾರಿ, ಟ್ರಂಪ್ ಅವರ ಕಿವಿಗೆ ಬಡಿದಿದೆ. ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಜನರ ಸಿಂಪತಿ ಗಳಿಸಲು ಇದೆಲ್ಲ ಕುತಂತ್ರ ಮಾಡಲಾಗಿದೆ. ಜನರ ಅನುಕಂಪಕ್ಕಾಗಿ ಇದೆಲ್ಲ ನಾಟಕ ಮಾಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.
ವರದಿ ಪ್ರಕಾರ ಒಬ್ಬ ದಾಳಿಕೋರನ ಗುರುತು ಪತ್ತೆಯಾಗಿದ್ದು, ಆತನ ಹೆಸರು ಥಾಮಸ್ ಮ್ಯಾಥ್ಯೂ ಕ್ರೂಕ್ಸ್. ಟ್ರಂಪ್ ಮೇಲೆ ದಾಳಿಯಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸೀಕ್ರೆಟ್ ಸರ್ವಿಸ್ ಏಜೆಂಟ್ ಈತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಏಕೆ ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ಮಾಡಿದ? ತಗುಲಿರುವುದು ಬುಲೆಟ್ ಅಥವಾ ಗಾಜಿನ ತುಂಡೋ ಎಂಬುದರ ಕುರಿತು ಕೂಡ ನಿಖರ ಮಾಹಿತಿ ಲಭ್ಯವಾಗಿಲ್ಲ.
ಯುಎಸ್ ಮಾಧ್ಯಮ ವರದಿಗಳು ಶೂಟರ್ ಅನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿವೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ‍್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಚಾವಣಿಯ ಮೇಲೆ ಕ್ರೂಕ್ಸ್ ಗನ್ ಸಮೇತ ಇದ್ದ ಎನ್ನಲಾಗಿದೆ.